ಸುಶಾಂತ್‍ ಸಿಂಗ್ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಒಪ್ಪಿಸಿದ ಬಿಹಾರ್‍ ಸರ್ಕಾರ

ನಟ ಸುಶಾಂತ್‍ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಬಿಹಾರ್‍ ಸರ್ಕಾರ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದೆ.

ಬಾಲಿವುಡ್‍ ನಟನ ಸಾವಿನ ಕುರಿತು ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದು, ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುವ ಬಗ್ಗೆ ಪರ-ವಿರೋಧ ವ್ಯಕ್ತವಾಗಿತ್ತು. ಈ ನಡುವೆ ಸುಶಾಂತ್​ ಸಿಂಗ್​ ಕುಟುಂಬದ ವಕೀಲ ವಿಕಾಸ್​ ಸಿಂಗ್​, ಪ್ರಕರಣವನ್ನು ಮುಂಬೈ ಪೊಲೀಸರಿಂದ ಸಿಬಿಗೆ ವರ್ಗಾವಣೆ ಮಾಡುವಂತೆ ಕೋರಿ ಬಿಹಾರ್‍ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​, ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದ್ದಾರೆ.

ಈ ನಡುವೆ ಆತ್ಮಹತ್ಯೆಗೆ ಶರಣಾಗಿರುವ ಸುಶಾಂತ್ ಸಿಂಗ್ ರಜಪೂತ್ ಖಾತೆಯಲ್ಲಿನ ಹಣದ ವರ್ಗಾವಣೆ ಕುರಿತು ಮಾಹಿತಿ ಪಡೆಯಲು ಮುಂಬೈ ಪೊಲೀಸರು ವಿಧಿ ವಿಜ್ಞಾನ ಲೆಕ್ಕಾಧಿಕಾರಿ (ಫಾರೆನ್ಸಿಕ್ ಆಡಿಟರ್) ನೇಮಕಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಪೊಲೀಸ್ ಆಯುಕ್ತ ಪರಮ್ ವೀರ್ ಸಿಂಗ್ ಅವರು, ಸುಶಾಂತ್ ಏಕೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರು ಎನ್ನುವ ಕೋನದಿಂದ ತನಿಖೆ ನಡೆಸಲಾಗುತ್ತಿದೆ. ಕಳೆದ ವರ್ಷ ಸುಶಾಂತ್ ಅವರ ಖಾತೆಯಲ್ಲಿ 18 ಕೋಟಿ ರೂಪಾಯಿ ಹಣವಿತ್ತು ಆದರೆ ಈಗ ಅವರ ಖಾತೆಯಲ್ಲಿ 4.5 ಕೋಟಿ ರೂಪಾಯಿ ಮಾತ್ರ ಇದೆ. ಕೆಲವು ಫಿಕ್ಸೆಡ್ ಡೆಪಾಸಿಟ್ಗಳೂ ಇವೆ. ಹಾಗಿದ್ದರೆ ಖಾತೆಯಲ್ಲಿದ್ದ ಹಣ ಏನಾಯಿತು ಎನ್ನುವುದು ಗೊತ್ತಾಗಿಲ್ಲ. ಹಣಕಾಸಿನ ವಿಚಾರದಲ್ಲಿ ಯಾರಾದರೂ ಅವರಿಗೆ ವಂಚಿಸಿದ್ದರಾ?  ಎನ್ನುವ ಕುರಿತು ತನಿಖೆ ನಡೆಯುತ್ತಿದೆ. ಸುಶಾಂತ್ ಪರ ವಕೀಲರು ನೀಡಿರುವ ಮಾಹಿತಿ ಪ್ರಕಾರ ಸುಶಾಂತ್ ಅವರು 2.5 ಕೋಟಿ ರೂಪಾಯಿ ಜಿಎಸ್ಟಿ ಕಟ್ಟಿದ್ದರು. ಜೊತೆಗೆ ಅಸ್ಸಾಂ ಮತ್ತು ಕೇರಳ ಪ್ರವಾಹಕ್ಕೆ 3 ಕೋಟಿ ರೂ. ದೇಣಿಗೆ ನೀಡಿದ್ದರು ಎಂದು ತಿಳಿದು ಬಂದಿದೆ ಎಂದು ಪರಂ ವೀರ್ ಹೇಳಿದ್ದಾರೆ.

Exit mobile version