28 ಕೋಟಿಗೆ ಹಕ್ಕು‌ ಪಡೆದ ‘ಲಹರಿಸಂಸ್ಥೆ’!

ಲಹರಿ ಮ್ಯೂಸಿಕ್ ಸಂಸ್ಥೆ ‘ಪ್ರೇಮಲೋಕ’ ಕಾಲದಿಂದಲೂ ದಾಖಲೆ ಬರೆಯುತ್ತಾ ಬಂದಿರುವ ಕನ್ನಡದ ಹೆಮ್ಮೆಯ ಸಂಗೀತ ಸಂಸ್ಥೆ. ರೆಹಮಾನ್ ನ ‘ರೋಜಾ’ದಿಂದ ಬಸ್ರೂರಿನ ‘ಕೆಜಿಎಫ್’ ತನಕ ದೊಡ್ಡ ಮೊತ್ತಕ್ಕೆ ಕೊಂಡು ಲಾಭವನ್ನು ಗಳಿಸುವ ವ್ಯವಹಾರಿಕತೆ ಧೈರ್ಯಕ್ಕೆ ವೇಲು ಎಂದು ಹೆಸರು. ಇದೀಗ ಮತ್ತೊಂದು ಬಿಗ್ ಬಜೆಟ್ ಚಿತ್ರವಾದ ‘ಆರ್ ಆರ್ ಆರ್’ ಸಿನಿಮಾದ ಅಗ್ರಿಮೆಂಟ್ ಗೆ ಬಾಹುಬಲಿ ಖ್ಯಾತಿಯ ಸಂಗೀತ ನಿರ್ದೇಶಕ ಕೀರವಾಣಿ ಸಹಿ ಹಾಕಿದ್ದಾರೆ.

ಹೈದರಾಬಾದ್ ನಲ್ಲಿ ಆಡಿಯೋ ಹಕ್ಕುಗಳನ್ನ ಪಡೆದ ಲಹರಿ ಸಂಸ್ಥೆ, ಲಹರಿ ಸಂಸ್ಥೆಯ ಮನೋಹರ್ ನಾಯ್ಡು, ನವೀನ್, ಕೀರವಾಣಿ ಜೊತೆ ಸಭೆಯಲ್ಲಿ ಭಾಗಿಯಾಗಿದ್ದಾರೆ. 28 ಕೋಟಿಗೆ ಆರ್ ಆರ್ ಆರ್ ಆಡಿಯೋ ಖರೀದಿಸಿರುವ ಲಹರಿ ಸಂಸ್ಥೆ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ರಾಜಮೌಳಿ ಎನ್ನುವ ನಿರ್ದೇಶಕರ ಬಗ್ಗೆಯೂ ಮಾತನಾಡಲೇಬೇಕಿದೆ. ಇತ್ತೀಚೆಗಷ್ಟೇ ತೆರೆಯ ಹಿಂದೆ ಆರ್​ಆರ್​ಆರ್​ ತಂಡ ಎಷ್ಟು ಕಷ್ಟಪಟ್ಟಿದೆ ಎಂಬುದನ್ನು ಮೇಕಿಂಗ್​ ವಿಡಿಯೋ ಮೂಲಕ ಪ್ರದರ್ಶಿಸಿತ್ತು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ನಟನೆಯ ‘ಆರ್​ಆರ್​ಆರ್​’ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಲಾಕ್​ಡೌನ್​ ಮುಗಿದ ಬಳಿಕ ಚಿತ್ರದ ಶೂಟಿಂಗ್​ ವೇಗ ಪಡೆದುಕೊಂಡಿದೆ. ನಿರ್ದೇಶಕ ರಾಜಮೌಳಿ ನಿರ್ದೇಶನದ ಸಿನಿಮಾ ಎಂದರೆ ಅದ್ದೂರಿತನಕ್ಕೆ ಹೆಸರುವಾಸಿ ಆಗಿರುತ್ತವೆ. ಬೃಹತ್​ ಸೆಟ್​ಗಳು​, ದೊಡ್ಡ ತಾರಾಗಣ, ಬಹುಕೋಟಿ ವೆಚ್ಚದಲ್ಲಿ ಸಿನಿಮಾ ತಯಾರಾಗುತ್ತದೆ. ಪ್ರಸ್ತುತ ಆಡಿಯೋ ಹಕ್ಕು ಬಿಕರಿಯಾದ ವಿಚಾರ ಕೂಡ ಹಾಗೆಯೇ ಸುದ್ದಿ ಮಾಡುತ್ತಿದೆ.

Exit mobile version