ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ; ಪೂರಕ ಪರೀಕ್ಷೆಗೆ ಶುಲ್ಕ ಪಾವತಿ ಅವಧಿ ವಿಸ್ತರಣೆ.

Second PU

2021-22ನೇ ಸಾಲಿನ ದ್ವಿತೀಯ ಪಿಯುಸಿ(Second PUC) ಪೂರಕ ಪರೀಕ್ಷೆಯನ್ನು(Supplementary Exam) ದಿನಾಂಕ 12-08-2022 ರಿಂದ 25-08-2022 ರವರೆಗೆ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅನುತ್ತೀರ್ಣರಾದ(Fail) ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗೆ ದಂಡ ಶುಲ್ಕದೊಂದಿಗೆ ಪರೀಕ್ಷಾ ಶುಲ್ಕ ಪಾವತಿಸುವ ಅವಧಿಯನ್ನು ಆಗಸ್ಟ್ 4 ರವರೆಗೆ ವಿಸ್ತರಿಸಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳ ಮರುಮೌಲ್ಯಮಾಪನ(Revaluation) ಮತ್ತು ಮರು ಏಣಿಕೆಯ ಪ್ರಕ್ರಿಯೆ ಮುಕ್ತಾಯವಾಗಿ ಜುಲೈ 31 ರಂದು ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲಾಗಿತ್ತು.

ಇದೀಗ ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶವನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಮಾಡಿಕೊಟ್ಟಿದೆ. ಪರೀಕ್ಷಾ ಶುಲ್ಕವನ್ನು ಪಾವತಿಸಿ ಪರೀಕ್ಷೆಯನ್ನು ಬರೆಯಲು ಅವಕಾಶವನ್ನು ಮಾಡಿಕೊಟ್ಟಿದೆ. ಪ್ರಾಂಶುಪಾಲರು ಶುಲ್ಕ ಪಾವತಿ ಮಾಡಿದ ವಿದ್ಯಾರ್ಥಿಗಳ ಮಾಹಿತಿಯನ್ನು ಆಗಸ್ಟ್ 5 ರೊಳಗೆ ಸ್ಯಾಟ್ಸ್ ತಂತ್ರಾಂಶದಲ್ಲಿ ದಾಖಲಿಸುವ ಜೊತೆಗೆ, ದಿನಾಂಕ 05.08.2022 ರಂದೇ ಕೆ2 ಚಲನ್ ಮೂಲಕ ಖಜಾನೆಗೆ ಶುಲ್ಕ ಸಂದಾಯ ಮಾಡಿ ವಿದ್ಯಾರ್ಥಿಗಳ ಪರೀಕ್ಷಾ ಅರ್ಜಿ, ಚೆಕ್ ಲಿಸ್ಟ್, ಚಲನ್ ಗಳನ್ನು ಆಯಾ ಜಿಲ್ಲಾ ಉಪ ನಿರ್ದೇಶಕರಿಗೆ ಸಲ್ಲಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.


ಜಿಲ್ಲಾ ಉಪನಿರ್ದೇಶಕರುಗಳು ಪ್ರಾಂಶುಪಾಲರಿಂದ ಸ್ವೀಕರಿಸಿದ ಅರ್ಜಿಗಳು ಸ್ಯಾಟ್ಸ್ ತಂತ್ರಾಂಶದಲ್ಲಿ ಇರುವುದನ್ನು ಖಚಿತಪಡಿಸಿಕೊಂಡು ಚೆಕ್ ಲಿಸ್ಟ್ ಪರಿಶೀಲಿಸಬೇಕು. ಪ್ರಾಂಶುಪಾಲರಿಂದ ಮುಚ್ಚಳಿಕೆ ಪಡೆದು, ನಂತರ ಕಾಲೇಜುವಾರು ಕ್ರೋಢಿಕೃತ ಪಟ್ಟಿಯನ್ನು, ಹಣವನ್ನು ಪಾವತಿಸಿದ ಮೂಲ ಚಲನ್ ಹಾಗೂ ಮುಚ್ಚಳಿಕೆ ಪತ್ರವನ್ನು ದಿನಾಂಕ 06.08.2022 ರಂದು ಕೇಂದ್ರ ಕಚೇರಿಗೆ ಸಲ್ಲಿಸಲು ಸೂಚಿಸಿದೆ.

Exit mobile version