7.5 ಕೋಟಿ ರೂ.ಗಳನ್ನು ಪ್ರಶಸ್ತಿ ರೂಪದಲ್ಲಿ ಪಡೆದ ಮಹಾರಾಷ್ಟ್ರದ ಶಿಕ್ಷಕ

ಲಂಡನ್, ಡಿ. 04: ವಾರ್ಕಿ ಫೌಂಡೇಷನ್ ನೀಡುವ ಜಾಗತಿಕ ಶಿಕ್ಷಕ ಪ್ರಶಸ್ತಿಗೆ ಈ ಬಾರಿ ಮಹಾರಾಷ್ಟ್ರದ ಶಿಕ್ಷಕ ರಣಜಿತ್‌ ಸಿನ್ಹಾ ದಿಸಾಲೆ ಪಾತ್ರರಾಗುವ ಮೂಲಕ 7.5 ಕೋಟಿ ರೂ.ಗಳನ್ನು ಪ್ರಶಸ್ತಿ ರೂಪದಲ್ಲಿ ಗೆದ್ದಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪರಿಟೆವಾಡಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ರಣಜಿತ್, ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ ಸಿಗಬೇಕೆಂದು ಹೋರಾಟ ನಡೆಸಿದ್ದರಲ್ಲದೆ ಗ್ರಾಮೀಣ ಪ್ರದೇಶಗಳಲ್ಲೂ ಕ್ಯೂ-ಆರ್ ಕೋಡ್ ಮೂಲಕ ಸುಲಭ ರೀತಿಯಲ್ಲಿ ಪಠ್ಯಗಳನ್ನು ಪರಿಚಯಿಸಿದ ಖ್ಯಾತಿ ಅವರಿಗಿದೆ.

ರಣಜಿತ್ ಸಿನ್ಹಾ ಅವರು ಕ್ಯು ಆರ್ ಕೋಡ್ ಅನ್ನು ಪರಿಚಯಿಸಿ ಅದರ ಮೂಲಕ ಬೇರೆ ಭಾಷೆಗಳಲ್ಲಿನ ಪಠ್ಯಪುಸ್ತಕಗಳಲ್ಲಿನ ಪಾಠಗಳನ್ನು ಮಾತೃಭಾಷೆಗೆ ತರ್ಜುಮೆ ಮಾಡಿದ್ದಲ್ಲದೆ, ವಿಡಿಯೋ ಪಾಠ, ಆಡಿಯೋ ಗೀತೆ, ಮಕ್ಕಳಿಗೆ ಇಷ್ಟವಾಗುವಂತಹ ಕಥೆಯನ್ನು ಇದರಲ್ಲಿ ಅಳವಡಿಸಿದ್ದರು. ಈ ಪಠ್ಯವನ್ನು ಮಹಾರಾಷ್ಟ್ರ ಸರ್ಕಾರ ಪ್ರಾಥಮಿಕ ಶಾಲಾ ಹಂತದಲ್ಲಿ ಬಳಸಿಕೊಳ್ಳಲು ಅನುಮತಿ ನೀಡಿತ್ತು.

ಈ ಬಾರಿಯ ಜಾಗತಿಕ ಶಿಕ್ಷಕ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ವಿಶ್ವದ ಹಲವೆಡೆಯಿಂದ 10 ಮಂದಿ ಪ್ರವೇಶ ಪಡೆದಿದ್ದರು, ಆದರೆ ರಣಜಿತ್ ಸಿನ್ಹಾ 7.5 ಕೋಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ರಣಜಿತ್ ಸಿನ್ಹಾ ಅವರು ತಾವು ಗೆದ್ದ ಬಹುಮಾನದಲ್ಲಿ ಅಂತಿಮ ಸುತ್ತಿಗೆ ಬಂದಿದ್ದ ಉಳಿದ 9 ಮಂದಿಗೆ ತಲಾ 40 ಲಕ್ಷ ರೂ.ಗಳನ್ನು ನೀಡಲು ನಿರ್ಧರಿಸಿದ್ದಾರೆ. 2014ರಲ್ಲಿ ಸ್ಥಾಪನೆಕೊಂಡ ವಾರ್ಕಿ ಫೌಂಡೇಷನ್ ನೀಡುವ ಜಾಗತಿಕ ಪ್ರಶಸ್ತಿ ಗೆದ್ದ ಶಿಕ್ಷಕ ರಣಜಿತ್‍ಸಿನ್ಹಾ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಭವ್‍ಠಾಕ್ರೆ ಅಭಿನಂದಿಸಿದ್ದಾರೆ.

Exit mobile version