ಬೆಂಗಳೂರು, ಏ. 23: ಮುಖ್ಯಮಂತ್ರಿಗಳಿಗೆ ಹೆಡ್ ಮಾಸ್ಟರ್ ರೀತಿ ಪಾಠ ಮಾಡುವುದನ್ನು ಬಿಟ್ಟು ಕೊರೊನಾ ನಿಯಂತ್ರಿಸುವ ಸಲುವಾಗಿ ರಾಜ್ಯಗಳ ಬೇಡಿಕೆಗಳನ್ನು ಮೊದಲು ಈಡೇರಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ಪ್ರಶ್ನೆಗಳನ್ನು ಹೇಳಿದ್ದಾರೆ. ‘ಪರಿಸ್ಥಿತಿ ಕೈಮೀರಿಹೋಗಿದೆ’ ಎಂದು ಕರ್ನಾಟಕದ ಮುಖ್ಯಮಂತ್ರಿಗಳು ಜನತೆಯ ಮುಂದೆ ಗೋಳಾಡುತ್ತಿರುವುದರಿಂದ ಪ್ರಶ್ನೆ ನಿಮ್ಮನ್ನೇ ಕೇಳಬೇಕಾಗಿದೆ. ಕೈಲಾಗದ ಮುಖ್ಯಮಂತ್ರಿ ಅವರನ್ನು ಇಟ್ಟುಕೊಂಡು ಕೊರೊನಾ ನಿಯಂತ್ರಣ ಮಾಡುವುದಾದರೂ ಹೇಗೆ ಪ್ರಧಾನಿಗಳೇ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಶೇ 65ರಷ್ಟು ಸಾಮಾನ್ಯ ಹಾಸಿಗೆ, ಶೇ 96ರಷ್ಟು ಬಹು ಅವಲಂಬನೆಯ ಹಾಸಿಗೆ, ಶೇ 98ರಷ್ಟು ಐಸಿಯು ಹಾಸಿಗೆ ಮತ್ತು ಶೇ 97ರಷ್ಟು ವೆಂಟಿಲೇಟರ್ ಹಾಸಿಗೆ ಭರ್ತಿಯಾಗಿವೆ. ನಿತ್ಯ 15 ಸಾವಿರಕ್ಕೂ ಹೆಚ್ಚು ಸೋಂಕಿತರು ಆಸ್ಪತ್ರೆ ಎದುರು ಕ್ಯೂ ನಿಲ್ಲುತ್ತಿದ್ದಾರೆ. ಅವರದ್ದೇನು ಗತಿ ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಖಾಸಗಿ/ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಮೀಸಲಾದ ಹಾಸಿಗೆಗಳು 7621, ಭರ್ತಿಯಾಗಿರುವುದು 6123, ಲಭ್ಯ ಇರುವುದು 1487 ಮಾತ್ರ. ಆದರೆ ನಿತ್ಯ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ 15 ಸಾವಿರಕ್ಕೂ ಹೆಚ್ಚು. ಈ ವಾಸ್ತವವನ್ನು ರಾಜ್ಯದ ಮುಖ್ಯಮಂತ್ರಿಗಳು ನಿಮಗೇನಾದರೂ ತಿಳಿಸಿದ್ದಾರೆಯೇ?
ಪ್ರತಿಯೊಂದು ರಾಜ್ಯದಲ್ಲಿ ಕೊರೊನಾ ಸೋಂಕಿತರು ಆಮ್ಲಜನಕ ಇಲ್ಲದೆ ಸಾಯುತ್ತಿದ್ದಾರೆ. ಆಮ್ಲಜನಕ ಪೂರೈಕೆ ಮಾಡಿ ಎಂದರೆ ಅಕ್ರಮ ದಾಸ್ತಾನು ಮಾಡಿದವರ ಮೇಲೆ ಕ್ರಮಕೈಗೊಳ್ಳಿ ಎಂದು ಕರೆ ನೀಡುತ್ತೀರಿ. ನೀವೇನು ರಾಜ್ಯಗಳ ಅನುಮತಿ ಪಡೆದು ಆಮ್ಲಜನಕ ರಪ್ತು ಮಾಡಿದ್ದೀರಾ?
ಪ್ರಧಾನಿ ನರೇಂದ್ರ ಮೋದಿ ಅವರೇ, ಪರದೆಯಲ್ಲಿ ಮತ್ತೆ ಮತ್ತೆ ಮುಖತೋರಿಸಿದರೆ ಕೊರೊನಾ ವೈರಸ್ ಓಡಿಹೋಗುವುದಿಲ್ಲ, ಆಗಾಗ ಮುಖ್ಯಮಂತ್ರಿಗಳಿಗೆ ಪಾಠಮಾಡಲು ನೀವು ಹೆಡ್ಮಾಸ್ಟರ್ ಕೂಡಾ ಅಲ್ಲ. ಮೊದಲು ರಾಜ್ಯಗಳ ಬೇಡಿಕೆಗಳನ್ನು ಈಡೇರಿಸಿ ಕೊರೊನಾ ವೈರಸ್ ನಿಯಂತ್ರಿಸಿ ಎಂದಿದ್ದಾರೆ.
ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಪರಿಸ್ಥಿತಿಯ ಅವಲೋಕನ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.