ಲಸಿಕೆ ಪೂರೈಕೆಯಿಲ್ಲದೇ ಕುಂಠಿತಗೊಂಡ ಲಸಿಕಾ ವಿತರಣಾ ಕಾರ್ಯಕ್ರಮ

ನವದೆಹಲಿ, ಜು. 07: ಕೋವಿಡ್ ಲಸಿಕೆಯ ಕೊರತೆಯಾಗಿರುವ ಕಾರಣ ದೇಶದ ಹಲವು ರಾಜ್ಯಗಳು, ತಮ್ಮಲ್ಲಿನ ಹಲವು ಕೇಂದ್ರಗಳಲ್ಲಿ ಲಸಿಕೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿವೆ. ಅಲ್ಲದೆ, ಜುಲೈ ಮೊದಲ ವಾರದಲ್ಲಿ ಪ್ರತಿದಿನ ನೀಡಲಾಗುತ್ತಿರುವ ಸರಾಸರಿ ಲಸಿಕೆ ಡೋಸ್‌ಗಳ ಸಂಖ್ಯೆಯಲ್ಲೂ ಇಳಿಕೆಯಾಗಿದೆ.

ತಮಿಳುನಾಡಿಗೆ ಈವರೆಗೆ 1.58 ಕೋಟಿ ಡೋಸ್‌ ಲಸಿಕೆ ಪೂರೈಸಲಾಗಿದೆ. ಇದರಲ್ಲಿ ಬಹುತೇಕ ಎಲ್ಲಾ ಡೋಸ್‌ಗಳನ್ನು ಈಗಾಗಲೇ ನೀಡಲಾಗಿದೆ. ಈಗ ಲಸಿಕೆ ಇಲ್ಲದೇ ಇರುವ ಕಾರಣ ರಾಜ್ಯದ ಬಹುತೇಕ ಎಲ್ಲಾ ಲಸಿಕಾ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಜೊತೆಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್, ಗೌತಮ ಬುದ್ಧ ನಗರ ಜಿಲ್ಲೆಗಳಲ್ಲಿ ಲಸಿಕೆ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಲಸಿಕೆ ಕೊರತೆ ಇರುವ ಕಾರಣ ಪ್ರತಿದಿನ 10 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿಯನ್ನು ತಲುಪಲು ಸಾಧ್ಯವಿಲ್ಲ. ಹೀಗೇ ಆದರೆ, ಡಿಸೆಂಬರ್ ಅಂತ್ಯದ ವೇಳೆಗೆ 18 ವರ್ಷ ಮೇಲ್ಪಟ್ಟ ರಾಜ್ಯದ ಎಲ್ಲಾ ಜನರಿಗೆ ಲಸಿಕೆ ನೀಡುವುದು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶದ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.

Exit mobile version