ಎಸಿಬಿ ಬಲೆಗೆ ಬಿದ್ದ ತಹಶೀಲ್ದಾರ್‌

ಚಿಕ್ಕಮಗಳೂರು ಜ 7 :  ತಹಶೀಲ್ದಾರ್‌ ಒಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಜಿಲ್ಲೆಯ ಶೃಂಗೇರಿ ತಾಲ್ಲೂಕಿನಲ್ಲಿ ನಡೆದಿದೆ. ಹಕ್ಕು ಪತ್ರ ನೀಡಲು ಲಂಚದ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಶೃಂಗೇರಿ ತಹಶೀಲ್ದಾರ ಅಂಬುಜ ಹಾಗೂ ಗ್ರಾಮ ಲೆಕ್ಕಿಗ ಸಿದ್ದಪ್ಪ ಅವರು ಎಸಿಬಿ ಬಲೆಗೆ ಬಿದ್ದಿದ್ದು, ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ ಎಸಿಬಿ ಅಧಿಕಾರಿಗಳು ನಂತರದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ

ಶೃಂಗೇರಿ ತಾಲ್ಲೂಕಿನ ಕಾವಡಿ ಗ್ರಾಮದ ವಾಸಿಯಾದ ಸಂಜಯ್ ಕುಮಾರ್ ಎಂಬುವವರು 2017ನೇ ಸಾಲಿನಲ್ಲಿ ಬೆಳಂದೂರು ಗ್ರಾಮದ ಕುಂದ್ರಿಯಲ್ಲಿ 18 ಗುಂಟೆ ಜಮೀನು ಖರೀದಿಸಿ ಜಮೀನಿನ ಪಕ್ಕದಲ್ಲಿ 60 X 60 ಅಳತೆಯ ವಾಸದ ಮನೆಯನ್ನು ನಿರ್ಮಿಸಿದ್ದು, ಮನೆಯ ಹಕ್ಕು ಪತ್ರಕ್ಕಾಗಿ ನಮೂನೆ-94 (ಸಿ) ಅಡಿಯಲ್ಲಿ ಶೃಂಗೇರಿ ತಾಲ್ಲೂಕು ಕಚೇರಿಗೆ 2018 ರಲ್ಲಿ ಅರ್ಜಿ ಸಲ್ಲಿಸಿದ್ದರು.
ಸಂಜಯ್ ಲಂಚದ ಹಣ ನೀಡಿ ಖಾತೆ ಮಾಡಿಸಿಕೊಳ್ಳಲು ಇಷ್ಟವಿಲ್ಲದ ಕಾರಣ ಈ ಬಗ್ಗೆ ಪೊಲೀಸ್ ಉಪಾಧೀಕ್ಷಕರು ಎಸಿಬಿ ಪೊಲೀಸ್ ಠಾಣೆ, ಚಿಕ್ಕಮಗಳೂರಿಗೆ ದೂರನ್ನು ನೀಡಿದ್ದು, ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಇಂದು ಶೃಂಗೇರಿಯ ಪಟ್ಟಣದದ ಪ್ರವಾಸಿ ಮಂದಿರದಲ್ಲಿ 25 ಸಾವಿರ ರೂಪಾಯಿಯನ್ನು ಗ್ರಾಮ ಲೆಕ್ಕಾಧಿಕಾರಿ ಸ್ವೀಕರಿಸುವ ಸಂದರ್ಭದಲ್ಲಿ ಡಿವೈಎಸ್‍ಪಿ ಸಿ.ಆರ್. ಗೀತಾ ನೇತೃತ್ವದಲ್ಲಿ ತನಿಖಾಧಿಕಾರಿ ಅನಿಲ್ ಮಂಜುನಾಥ್ ಪಿಐ, ಮತ್ತು ಸಿಬ್ಬಂದಿಗಳು, ಭ್ರಷ್ಟಾಚಾರ ನಿಗ್ರಹ ದಳ ಎ.ಜಿ ರಾಥೋಡ್ ರವರುಗಳು ನಡೆಸಿದ ಕಾರ್ಯಾಚರಣೆಯ ಯಶಸ್ವಿಯಾಗಿದ್ದಾರೆ.

ನೆನ್ನೆ ತಡರಾತ್ರಿ ವರೆಗೂ ಶೃಂಗೇರಿ ನಿರೀಕ್ಷಣಾ ಮಂದಿರದಲ್ಲಿ ವಿಚಾರಣೆ ನಡೆಸಿದ ಅಧಿಕಾರಿಗಳು ರಾತ್ರಿ ಜಡ್ಜ್ ಮುಂದೆ ಹಾಜರುಪಡಿಸಿದ್ದರು, ಎಸಿಬಿ ಮೂಲಗಳ ಪ್ರಕಾರ ಜನವರಿ 20ನೇ ತಾರೀಖಿನ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಂಬುಜಾ ಬೆಂಬಲಕ್ಕೆ ರಾಜಕಾರಣಿಗಳು : ನೆನ್ನೆ ರಾತ್ರಿ ಶೃಂಗೇರಿ ನಿರೀಕ್ಷಣಾ ಮಂದಿರದಲ್ಲಿ ತನಿಖೆ ನಡೆಸುತ್ತಿದ್ದ ವೇಳೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಒಗ್ಗೂಡಿ ಅಂಬುಜಾ ಅವರ ವಿರುದ್ಧ ಕ್ರಮ ಕೈಗೊಳ್ಳಬಾರದು, ಬಡವರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಒತ್ತಾಯಿಸಿದ್ದರು. ಆದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ

Exit mobile version