ಸಂಭ್ರಮದಿಂದ ಜನ್ಮದಿನ ಆಚರಿಸದಿರಲು ನಟ ಗಣೇಶ್ ನಿರ್ಧಾರ: ಕೊರೊನಾ ಸಂಕಷ್ಟದಲ್ಲಿರುವವರಿಗೆ ನೆರವಾಗಿ ಎಂದು ಗೋಲ್ಡನ್ ಸ್ಟಾರ್ ಮನವಿ

ಬೆಂಗಳೂರು,ಜೂ.29: ಕೊರೊನಾ ಕಾರಣಕ್ಕೆ ತಮ್ಮ ಜನ್ಮದಿನವನ್ನು ಸಂಭ್ರಮದಿಂದ ಆಚರಣೆ ಮಾಡಿಕೊಳ್ಳದಿರಲು ನಿರ್ಧರಿಸಿರುವ ಗೋಲ್ಡನ್ ಸ್ಟಾರ್‌ ಗಣೇಶ್, ತಮ್ಮ ಬರ್ತಡೇ ಆಚರಿಸುವ ಸಲುವಾಗಿ ಕೇಕ್, ಹಾರ ಅಥವಾ ಉಡುಗೊರೆಗಾಗಿ ಹಣ ಖರ್ಚು ಮಾಡದೆ, ಅದೇ ಹಣವನ್ನು ಕೊರೊನಾದಿಂದಾಗಿ ಸಂಕಷ್ಟದಲ್ಲಿರುವವರಿಗೆ ನೀಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಅಭಿಮಾನಿಗಳಿಗಾಗಿ ಪ್ರೀತಿಯ ಪತ್ರಯೊಂದನ್ನು ಬರೆದಿರುವ ನಟ ಗಣೇಶ್, ನನ್ನ ಅರಿವಿದ್ದೋ, ಅರಿವಿಲ್ಲದೆಯೋ ಕೋವಿಡ್ ಸಮಯದಲ್ಲಿ ತಮ್ಮ‌ ಹೆಸರಿನಲ್ಲಿ ಮಾಡಿರುವ ಕೆಲಸಗಳಿಗೆ ಪ್ರಣಾಮಗಳು. ಈ ಮೂಲಕ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಪ್ರತಿ ವರ್ಷ ನನ್ನ ಜನ್ಮದಿನವನ್ನು ಹಬ್ಬದಂತೆ ಆಚರಿಸುತ್ತಾ ಬಂದಿದ್ದೀರಿ. ಆದರೆ ಈ ವರ್ಷ ಕೊರೊನಾ ಸಂಕಷ್ಟಕ್ಕೆ ಸಿಲುಕಿ ಸಿನಿಮಾ ಸಹೋದ್ಯೋಗಿಗಳು, ಆತ್ಮೀಯರು ಹಾಗೂ ಗೆಳೆಯರು ಬಲಿಯಾಗಿರುವುದು ನೋವು ತಂದಿದೆ. ಅದೆಷ್ಟೋ ಜೀವಗಳು ನಲುಗಿ ಹೋಗಿವೆ.

ಈ ಎಲ್ಲಾ ನೋವುಗಳ ನಡುವೆ ಸಂಭ್ರಮಕ್ಕಿದು ಸರಿಹೊಂದುವ ಸಮಯವಲ್ಲ ಎಂದು ನಿರ್ಧರಿಸಿ ಈ ವರ್ಷ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ಇಚ್ಛಿಸಿರುತ್ತೇನೆ. ಅಲ್ಲದೇ ಜನ್ಮದಿನದಂದು ತಾವು ಹೊರಾಂಗಣ ಚಿತ್ರೀಕರಣದಲ್ಲಿ ತೊಡಗಿರುತ್ತೇನೆ. ಆದ್ದರಿಂದ ಪ್ರತಿ ವರ್ಷವೂ ಪ್ರೀತಿಯಿಂದ ಹುಟ್ಟುಹಬ್ಬ ಆಚರಣೆಗಾಗಿ ನೀವು ತರುವ ಕೇಕ್, ಹಾರ ಅಥವಾ ಉಡುಗೊರೆಗಾಗಿ ಹಣ ಖರ್ಚು ಮಾಡದೆ, ಅದೇ ಹಣವನ್ನು ಕೊರೊನಾದಿಂದಾಗಿ ಸಂಕಷ್ಟದಲ್ಲಿರುವವರಿಗೆ ನೀಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿರುವ ಅವರು, ಅದುವೇ ತಮಗೆ ಶ್ರೀರಕ್ಷೆ ಎಂದಿದ್ದಾರೆ.

Exit mobile version