ಬೆಂಗಳೂರು ಅ 16 : ಕೋಟಿಗೊಬ್ಬ 3 ಸಿನಿಮಾ ಅಂದುಕೊಂಡ ದಿನವೇ ಬಿಡುಗಡೆಯಾಗದೆ ಇರುವುದಕ್ಕೆ ನಟ ಕಿಚ್ಚ ಸುದೀಪ್ ಕಾರಣಗಳನ್ನು ನೀಡಿದ್ದಾರೆ
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿದ್ದ ಸುದೀಪ್, ”ಯಾರು ಇದರ ಹಿಂದೆ ಇದ್ದಾರೆಂಬುದು ಗೊತ್ತಿದೆ” ಎಂದಿದ್ದರು. ಸಿನಿಮಾವು ಅಕ್ಟೋಬರ್ 15 ರಂದು ಬಿಡುಗಡೆ ಆಯಿತಾದರೂ ವಿವಾದ ತಣ್ಣಗಾಗಿಲ್ಲ. ಇಂದು ಮಾಧ್ಯಮದೊಂದಿಗೆ ಮಾತನಾಡಿರುವ ಕಿಚ್ಚ ಸುದೀಪ್, ”ಭೂಮಿಕಾ ಚಿತ್ರಮಂದಿರಕ್ಕೆ ಕರೆ ಮಾಡಿ, ‘ಕೋಟಿಗೊಬ್ಬ 3′ ಸಿನಿಮಾ ಬಿಡುಗಡೆ ಮಾಡಬೇಡಿ ಎಂದು ಬೆದರಿಕೆ ಹಾಕಿದ್ದರು, ಇದಕ್ಕೆ ಸಾಕ್ಷ್ಯ ಇದೆ’ ಎಂದಿದ್ದಾರೆ.
ಹಿರಿಯ ವಿತರಕರೊಬ್ಬರು, ಚಿತ್ರಮಂದಿರ ಕೊಡಬೇಡಿ ಎಂದು ಕರೆಮಾಡುತ್ತಾರೆ. ಆಡಿಯೋ ಕ್ಲಿಪ್ಪಿಂಗ್ ಸಹ ಕಳಿಸಿದ್ದಾರೆ. ಇದನ್ನೆಲ್ಲ ನೋಡಿ ನಗು ಬರುತ್ತದೆ. ಇಷ್ಟು ದಿನ ಬರೀ ಸಿನಿಮಾ ಬಗ್ಗೆ, ಚಿತ್ರಕತೆ ಬಗ್ಗೆ, ಕತೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದೆ. ಇನ್ನು ಮುಂದೆ ಇಂಥಹವರ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ” ಎಂದು ಪರೋಕ್ಷವಾಗಿ ಎಚ್ಚರಿಕೆಯ ದನಿಯನ್ನೇ ಹೇಳಿದ್ದಾರೆ ಸುದೀಪ್.
”ಅವರನ್ನು ದೇವರು ಚೆನ್ನಾಗಿಟ್ಟಿದ್ದಾರೆ, ಒಳ್ಳೆಯ ಹೆಸರಿದೆ, ಅವರ ಸಿನಿಮಾಗಳು ಚೆನ್ನಾಗಿ ಓಡುತ್ತಿರುತ್ತವೆ. ಹೀಗಿದ್ದಾಗ ಚಿತ್ರಮಂದಿರಗಳಿಗೆ ಕರೆ ಮಾಡಿ, ಸಿನಿಮಾ ರಿಲೀಸ್ ಮಾಡಬೇಡಿ ಎನ್ನುತ್ತಾರೆ. ಇಷ್ಟು ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದಾರೆ, ಹೀಗೆ ಮಾಡಿ-ಮಾಡಿ ಎಷ್ಟು ಹೊಸಬರನ್ನು ಇವರು ಹಾಳು ಮಾಡಿರಬಹುದು ಎಂಬ ಯೋಚನೆ ಬರುತ್ತದೆ” ಎಂದು ಹೆಸರು ಹೇಳದೆ ಹಿರಿಯ ವಿತರಕರ ವಿರುದ್ಧ ವಾಗ್ದಾಳಿ ನಡೆಸಿದರು ಸುದೀಪ್.
‘ಕೋಟಿಗೊಬ್ಬ 3’ ಸಿನಿಮಾದ ಬಿಡುಗಡೆ ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಸಿನಿಮಾ ಅಕ್ಟೋಬರ್ 14 ರಂದು ಬಿಡುಗಡೆ ಆಗಬೇಕಿತ್ತು, ಆದರೆ ವಿತರಕರು ಕೊಟ್ಟ ಸಮಸ್ಯೆಯಿಂದ ಸಿನಿಮಾ ಬಿಡುಗಡೆ ಆಗಲಿಲ್ಲ ಎಂದು ನಿರ್ಮಾಪಕ ಸಂದೇಶ ಹೇಳಿದ್ದರು. ಸೂರಪ್ಪ ಬಾಬು ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುದೀಪ್ ”ನಮ್ಮಿಬ್ಬರ ನಡುವೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಇರುವುದು ಸತ್ಯವೇ. ಆದರೆ ಅದು ಸಿನಿಮಾ ನಿಲ್ಲಿಸುವ ಮಟ್ಟದ್ದಲ್ಲ. ಅವರು ಸಾಕಷ್ಟು ಕಷ್ಟ ಪಟ್ಟು ಒಂದೊಳ್ಳೆ ಸಿನಿಮಾ ಮಾಡಿದ್ದಾರೆ. ಆದರೆ ವಿತರಕರು ಹೀಗೆ ಕೈ ಕೊಟ್ಟಾಗ ಏನೂ ಮಾಡಲಾಗುವುದಿಲ್ಲ. ಅವರು ತಮ್ಮ ಸುತ್ತ ಇನ್ನೂ ಕೆಲವು ಸಹಾಯದ ಕೈಗಳನ್ನು ಬೆಳೆಸಿಕೊಳ್ಳಬೇಕು. ಒಳ್ಳೆಯ ಜನರನ್ನು ಇಟ್ಟುಕೊಳ್ಳಬೇಕು. ನಾನು ಈಗಾಗಲೇ ಎರಡು ಸಿನಿಮಾವನ್ನು ಸೂರಪ್ಪ ಬಾಬು ಜೊತೆ ಮಾಡಿದ್ದೇನೆ. ಅವರು ಒಳ್ಳೆಯ ಮನುಷ್ಯರೆ. ಕೆಲವು ಕೊರತೆಗಳು ಇವೆ, ಆದರೆ ಅವು ಯಾರಲ್ಲಿಲ್ಲ, ನನ್ನಲ್ಲೂ ಕೊರತೆಗಳಿವೆ. ನಮ್ಮ ಕುಟುಂಬದವರು ಏನೋ ಮಾತನಾಡಿದರು ಎಂದರೆ ಅವರನ್ನು ಬಿಟ್ಟುಕೊಡಲಾಗುತ್ತದೆಯೇ ಎಂದು ಸ್ಪಷ್ಟನೆ ನೀಡಿದರು.