`ಅಗ್ನಿ ಪ್ರವ’ದಲ್ಲಿ ವರ್ಷ ತಮ್ಮಯ್ಯ

ಕನ್ನಡಕ್ಕೆ ಮತ್ತೋರ್ವ ಆಕ್ಷನ್ ಹೀರೋಯಿನ್ ಎಂಟ್ರಿಯಾಗುತ್ತಿದ್ದಾರೆ. ಹೆಸರು ವರ್ಷಾ ತಮ್ಮಯ್ಯ. ಇವರು ಮೂಲತಃ ಕನ್ನಡತಿಯೇ ಆದರೂ ಇದುವರೆಗೆ ನಟಿಸಿದ ಐದು ಚಿತ್ರಗಳು ಕೂಡ ತೆಲುಗಿನವು. ಇದೀಗ ಮೊದಲ ಬಾರಿ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತಯಾರಾಗುತ್ತಿರುವ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ ವರ್ಷಾ ತಮ್ಮಯ್ಯ.

ಚಿತ್ರದ ನಿರ್ದೇಶಕ ಸುರೇಶ್ ಆರ್ಯ ಮೂಲತಃ ಕನ್ನಡಿಗರಾಗಿದ್ದರೂ ತೆಲುಗಿನ ಖ್ಯಾತ ನಿರ್ಮಾಪಕ ರಾಜಮೌಳಿಯವರ ತಂದೆ ವಿಜಯೇಂದ್ರ ಪ್ರಸಾದ್ ಅವರ ತಂಡದಲ್ಲಿದ್ದವರು. ಹಾಗಾಗಿಯೇ ವಿಜಯೇಂದ್ರ ಪ್ರಸಾದ್ ಅವರು ಚಿತ್ರದ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದರು. ಚಾಮರಾಜ ಪೇಟೆಯಲ್ಲಿರುವ ಕಲಾವಿದರ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ ಕುಮಾರ್ ಅವರ ಹಿರಿಯ ಪುತ್ರಿ ಲಕ್ಷ್ಮೀ ಮತ್ತು ಅವರ ಪತಿ ಗೋವಿಂದರಾಜ್ ಅವರು ಕ್ಲಾಪ್ ಹಿಡಿದು ಚಾಲನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ ಪ್ರಸಾದ್, “ದೇವತಾ ಮಾನವ ಡಾ.ರಾಜ್ ಅವರ ಪುತ್ರಿಯ ಮುಹೂರ್ತಕ್ಕೆ ಆಗಮಿಸಿರುವುದು ಡಾ.ರಾಜ್ ಅವರ ಆಶೀರ್ವಾದವನ್ನು ಸೂಚಿಸುತ್ತದೆ. ಹಾಗಾಗಿ ಚಿತ್ರಕ್ಕೆ ಒಂದೊಳ್ಳೆಯ ಆರಂಭ ದೊರಕಿರುವ ನಂಬಿಕೆ ತಮಗಿದೆ” ಎಂದರು. ಚಿತ್ರದಲ್ಲಿ ನಾಯಕಿಯಾಗಿರುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಕೂಡ ವಹಿಸಿರುವ ವರ್ಷಾ ತಮ್ಮಯ್ಯ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾದ ಕಾರಣ ತಮಗೆ ಸಿನಿಮಾ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದರು. ಚಿತ್ರದಲ್ಲಿ ಸಾಕಷ್ಟು ಆಕ್ಷನ್ ಸನ್ನಿವೇಶಗಳು ಇವೆ. ಆದರೆ ಇದು ಒಂದು ಮಾಸ್ ಎಂಟರ್ಟೇನರ್ ಆಗಿರುತ್ತದೆ ಎನ್ನುವುದನ್ನಷ್ಟೇ ನಿರ್ದೇಶಕ ಸುರೇಶ್ ಬಿಟ್ಟುಕೊಟ್ಟರು.

ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಾರಾಯಣ ಸ್ವಾಮಿ, ಚಿತ್ರಕ್ಕೆ ಶೀರ್ಷಿಕೆ ನೀಡಿರುವ ನಿರ್ದೇಶಕ ಜೋ ಸೈಮನ್, ಕಾರ್ಯಕಾರಿ ನಿರ್ಮಾಪಕ ಜಿತೇಂದ್ರ ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಮೊದಲಾದವರು ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ನಟಿ ಜ್ಯೋತಿ ರೈ ಕಾರ್ಯಕ್ರಮ ನಿರೂಪಿಸಿದರು.

Exit mobile version