ಮೈಸೂರಿನ ಉತ್ಪನ್ನಗಳಿಗೆ ಅಮೇಜಾನ್ ಗಾಳ: ಇನ್ಮುಂದೆ ಆನ್ಲೈನ್ ನಲ್ಲಿ ಸಿಗಲಿದೆ ಹಲವು ಉತ್ಪನ್ನಗಳು

ಮೈಸೂರು, ಜ. 30: ಮೈಸೂರಿನ ಉತ್ಪನ್ನಗಳಿಗೆ ಗಾಳ ಹಾಕಿರುವ ಅಮೆಜಾನ್, ಇದಕ್ಕಾಗಿ ನಗರದ ಉದ್ಯಮಿಗಳಿಗೆ ಶೀಘ್ರ ತರಬೇತಿ ಸಹ ನೀಡಲು ಮುಂದಾಗಿದೆ.

ಕರ್ನಾಟಕದ ಇ-ಕಾಮರ್ಸ್‌ ರಫ್ತು ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಅಮೆಜಾನ್‌ನೊಂದಿಗೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದಂತೆ ಎಂಎಸ್‌ಎಂಇ ಕ್ಲಸ್ಟರ್‌ಗಳಲ್ಲಿ ಉದ್ಯಮಿಗಳಿಗೆ ತರಬೇತಿ ನೀಡಲು ಆಯ್ಕೆ ಮಾಡಿಕೊಂಡಿರುವ ಜಿಲ್ಲೆಗಳಲ್ಲಿ ಮೈಸೂರು ಕೂಡ ಒಂದಾಗಿರುವುದು ವಿಶೇಷ.

ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಒಪ್ಪಂದಕ್ಕೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್‌ ಶೆಟ್ಟರ್‌ ಸಹಿ ಹಾಕಿದ್ದಾರೆ.

ಆಟೋಮೊಬೈಲ್‌, ಕೃಷಿ, ಏರೋಸ್ಪೇಸ್‌, ಜವಳಿ, ಬಯೋಟೆಕ್‌, ಆಟಿಕೆಗಳು, ಕರಕುಶಲ ವಲಯದಂಥ ಹಲವಾರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕರ್ನಾಟಕ ನೆಲೆಯಾಗಿದೆ. ಜಾಗತಿಕ ಮಟ್ಟದಲ್ಲಿ ವಿಸ್ತೃತ ಜಾಲ ಹೊಂದಿರುವ ಅಮೆಜಾನ್‌ ಜತೆಗಿನ ಒಪ್ಪಂದದಿಂದ ಕರ್ನಾಟಕದ ಎಂಎಸ್‌ಎಂಇಗಳಿಗೆ ಉತ್ತೇಜನ ದೊರಕಿಸಿಕೊಡಲು ಈ ಒಪ್ಪಂದ ಸಹಕಾರಿಯಾಗಲಿದೆ.

ಕೋವಿಡ್‌ನಿಂದ ಹೆಚ್ಚು ತೊಂದರೆಗೊಳಗಾದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಚೇತರಿಕೆಗೆ ಈ ಒಪ್ಪಂದ ನೆರವಾಗಲಿದೆ ಎನ್ನಲಾಗಿದೆ. ಅದಕ್ಕಾಗಿ ಬಳ್ಳಾರಿ, ಮೈಸೂರು, ಚನ್ನಪಟ್ಟಣ ಮುಂತಾದ ಪ್ರಮುಖ ಎಂಎಸ್‌ಎಂಇ ಕ್ಲಸ್ಟರ್‌ಗಳಲ್ಲಿ ಉದ್ಯಮಿಗಳಿಗೆ ಅಮೆಜಾನ್‌ ತರಬೇತಿ ಕಾರ್ಯಾಗಾರ ನಡೆಸಲಿದೆ.
ಜಾಗತಿಕವಾಗಿ 30 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಅಮೆಜಾನ್‌ ಬಿ2ಸಿ (ಉದ್ಯಮದಿಂದ ಗ್ರಾಹಕರಿಗೆ), ಇ-ಕಾಮರ್ಸ್‌ ರಫ್ತಿನ ಬಗ್ಗೆ ಕಾರ್ಯಾಗಾರದಲ್ಲಿ ಅರಿವು ಮೂಡಿಸಲಿದೆ. ಇದರಿಂದ ತಮ್ಮದೇ ಬ್ರ್ಯಾಂಡ್‌ ಆರಂಭಿಸಿ ಅಮೆಜಾನ್‌ ಗ್ಲೋಬಲ್‌ ಸೆಲ್ಲಿಂಗ್‌ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಹಿವಾಟು ನಡೆಸಬಹುದಾಗಿದೆ.

Exit mobile version