‘ಅಮೃತ ಗ್ರಾಮ ಪಂಚಾಯತ್ ಯೋಜನೆ’ ಮುಖಾಂತರ ಗ್ರಾಮ ಅಭಿವೃದ್ದಿ – ಬೊಮ್ಮಾಯಿ

 ಬೆಂಗಳೂರು ಸೆ 23 : ಪ್ರತಿಯೊಂದು ಸೌಲಭ್ಯಕ್ಕೂ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿಗೆ ಹೋಗುವ ಬದಲು ಗ್ರಾಮ ಪಂಚಾಯತ್‌ಗಳ ಮುಖೇನ ಸರ್ಕಾರ‌ದ ವಿವಿಧ ಸೇವೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹೊಸ ಯೋಜನೆಯೊಂದನ್ನು ರೂಪಿಸಲಾಗುತ್ತಿದ್ದು, ಇದನ್ನು 2022 ಜನವರಿ 26 ರಂದು ಐದು ಜಿಲ್ಲೆಗಳಲ್ಲಿ ಪ್ರಾಯೋಗಿಕ‌ವಾಗಿ ಜಾರಿಗೊಳಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದ ಆವರಣದಲ್ಲಿ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ನೂತನ ಯೋಜನೆಯಾದ ‘ಅಮೃತ ಗ್ರಾಮ ಪಂಚಾಯತ್ ಯೋಜನೆ’ ಗೆ ಚಾಲನೆ ನೀಡಿ ಮಾತನಾಡಿದ ಅವರು ಮುಂಧಿನ ದಿನಗಳಲ್ಲಿ ರಾಜ್ಯದ ಗ್ರಾಮ ಪಂಚಾಯತ್‌ಗಳ ಮೂಲಕವೇ ಪಿಂಚಣಿ ಸೇವೆಯನ್ನು ಒಳಗೊಂಡಂತೆ, ಇನ್ನಿತರ ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಯೋಜನೆ ಕಾರ್ಯರೂಪಕ್ಕೆ ತರಲಾಗುವುದು. ಪ್ರಾಯೋಗಿಕ ಹಂತದಲ್ಲಿ ಐದು ಜಿಲ್ಲೆಗಳಲ್ಲಿ ಆನ್ಲೈನ್ ಗ್ರಾಮ ಪಂಚಾಯತ್ ಮೂಲಕ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು. ಅದಕ್ಕೆ ಅಗತ್ಯ ಸಿದ್ಧತೆ‌ಯನ್ನು ಅಧಿಕಾರಿಗಳು ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಇದರಿಂದ ಸರ್ಕಾರಿ ಕಚೇರಿಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಿ, ಗ್ರಾಮ ಪಂಚಾಯತ್ ಮೂಲಕವೇ ಸುಲಭವಾಗಿ ಪಡೆಯುವುದು ಸಾಧ್ಯವಾಗುತ್ತದೆ ಎಂದು ಸಿಎಂ ತಿಳಿಸಿದರು

ಅಮೃತ ಯೋಜನೆಯಡಿ 2300 ಕೋಟಿ ರೂ. ಗಳಷ್ಟರ ಕೆಲಸ ಮಾಡಲಾಗುತ್ತದೆ. ಶಾಲೆ, ಗ್ರಂಥಾಲಯ, ತ್ಯಾಜ್ಯ ನಿರ್ವಹಣೆ ಮೊದಲಾದವುಗಳ ಅಭಿವೃದ್ಧಿ ವಿಚಾರ‌ವಾಗಿ ಒಂದು ಪಂಚಾಯತ್‌ಗೆ ಸುಮಾರು 100 ಕೋಟಿ ಖರ್ಚು ಮಾಡಲಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ

ಕಾರ್ಯಕ್ರಮದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅಮೃತ ಗ್ರಾಮ ಪಂಚಾಯತಿ ಯೋಜನೆಗೆ ಚಾಲನೆ ನೀಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ತೋಟಗಾರಿಕೆ ಮತ್ತು ಯೋಜನೆ ಮತ್ತು ಸಾಂಖ್ಯಿಕ ಸಚಿವ ಎನ್.ಮುನಿರತ್ನ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಾಸಕ ರಿಜ್ವಾನ್ ಅರ್ಷದ್, ಇನ್ನಿತರರು ಭಾಗವಹಿಸಿದ್ದರು.

Exit mobile version