‘ಮೇಡ್ ಇನ್ ಬೆಂಗಳೂರು’ ಚಿತ್ರದಲ್ಲಿ ಅನಂತನಾಗ್ ಮತ್ತು ಸಾಯಿಕುಮಾರ್

ನವನಟ ಮಧುಸೂದನ್ ಗೋವಿಂದ್ ನಾಯಕರಾಗಿ ನಟಿಸುತ್ತಿರುವ ‘ಮೇಡ್ ಇನ್ ಬೆಂಗಳೂರು’ ಚಿತ್ರದಲ್ಲಿ ಅನಂತ ನಾಗ್, ಸಾಯಿ ಕುಮಾರ್ ಮತ್ತು ಪ್ರಕಾಶ್ ಬೆಳವಾಡಿ ನಟಿಸುತ್ತಿದ್ದಾರೆ. ಚಿತ್ರದ ಮಾಧ್ಯಮಗೋಷ್ಠಿಯಲ್ಲಿ ಈ ಹಿರಿಯನಟರು ಕೂಡ ಪಾಲ್ಗೊಂಡಿದ್ದರು.

ಪುನೀತ್ ಮಾಂಜ, ವಂಶಿಧರ್, ಹಿಮಾಂಶಿ ವರ್ಮ, ಸುಧಾ ಬೆಳವಾಡಿ, ಮಂಜುನಾಥ್ ಹೆಗ್ಡೆ, ಶಂಕರಮೂರ್ತಿ, ವಿನೀತ್, ರಮೇಶ್ ಭಟ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ರದೀಪ್ ಶಾಸ್ತ್ರಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.

ಅನಂತನಾಗ್ ಅವರು ಚಿತ್ರದ ಬಗ್ಗೆ ಮಾತನಾಡಿ, “ಕೆಲವು ತಿಂಗಳುಗಳ ಹಿಂದೆ ನಿರ್ಮಾಪಕ ಬಾಲಕೃಷ್ಣ ಮತ್ತು ನಿರ್ದೇಶಕ ಪ್ರದೀಪ್ ಶಾಸ್ತ್ರಿ ಈ ಚಿತ್ರದ ಸಂಬಂಧ ಮನೆಗೆ ಬಂದಿದ್ದರು. ಅವರು ರಾಘವೇಂದ್ರ ಸ್ವಾಮಿಗಳ ಪರಮಭಕ್ತರು. ನಾನು ಹುಟ್ಟಿದ್ದು ಕರಾವಳಿಯ ಭಾಗವಾದ್ದರಿಂದ ನನಗೆ ಮೊದಲು ಗುರು ರಾಘವೇಂದ್ರರ ಕುರಿತಾಗಿ ಗೊತ್ತಿರಲಿಲ್ಲ. ‘ನಾ ನಿನ್ನ ಬಿಡಲಾರೆ’ ಚಿತ್ರದಲ್ಲಿ ಮೊದಲ ಬಾರಿಗೆ ಗುರು ರಾಘವೇಂದ್ರ ಕುರಿತು ಹಾಡಿತ್ತು. ಆ ನಂತರ ಅವರ ಬಗ್ಗೆ ತಿಳಿದುಕೊಳ್ಳುತ್ತಾ ಹೋದೆ. ಮನೆಯಲ್ಲಿ ಅವರ ಮೂರ್ತಿಯನ್ನಿಟ್ಟು ಪೂಜೆ ಸಹ ಪ್ರಾರಂಭವಾಯಿತು. ಅವರೇ ಈ ಪ್ರಾಜೆಕ್ಟ್​ ಕೊಡಿಸಿದರೇನೋ ಎನಿಸುವಂತಿದೆ. ಪ್ರದೀಪ್ ಕೊಟ್ಟ ಸ್ಕ್ರಿಪ್ಟ್​ ಓದಿದೆ. ಬಹಳ ಖುಷಿಯಾಯಿತು. ನನ್ನದು ಇದರಲ್ಲಿ ಹೀರಾ ನಂದಾನಿ ಎಂಬ ಸಿಂಧಿ ವ್ಯಾಪಾರಿಯ ಪಾತ್ರ ನನ್ನದು. ಬಹಳ ಚೆನ್ನಾಗಿ ಈ ಪಾತ್ರವನ್ನು ಬರೆದಿದ್ದಾರೆ. ನನಗೆ ಒಬ್ಬ ಸಿಂಧಿ ವ್ಯಾಪಾರಿಯ ಪರಿಚಯವಿತ್ತು. ಅವರೇ ಖ್ಯಾತ ನಿರ್ಮಾಪಕ ಮತ್ತು ವಿತರಕ ಪಾಲ್​ ಚಂದಾನಿ. ನನ್ನ ಅದೆಷ್ಟೋ ಚಿತ್ರಗಳ ವಿತರಣೆ ಮಾಡಿದ್ದಾರೆ ಅವರು. ಅವರನ್ನು ಹತ್ತಿರದಿಂದ ನೋಡಿದ್ದೆನಾದ್ದರಿಂದ ಅವರ ಮ್ಯಾನರಿಸಂ ಬಳಸಿಕೊಳ್ಳಬಹುದಾ ಎಂದು ನಿರ್ದೇಶಕರನ್ನು ಕೇಳಿದೆ. ಅವರು ಒಪ್ಪಿದರು. ಅವರ ಮಾತಿನ ಧಾಟಿ ಮತ್ತು ಮ್ಯಾನರಿಸಂಗಳನ್ನು ಈ ಚಿತ್ರದಲ್ಲಿ ಸ್ವಲ್ಪ ಮಟ್ಟಿಗೆ ಬಳಸಿಕೊಂಡಿದ್ದೇನೆ” ಎಂದರು.

“ನಾನು ಅನಂತ್​ ನಾಗ್​ ಮತ್ತು ಪ್ರಕಾಶ್​ ಬೆಳವಾಡಿ ಅವರ ದೊಡ್ಡ ಅಭಿಮಾನಿ” ಎಂದು ಮಾತು ಶುರು ಮಾಡಿದ ಸಾಯಿಕುಮಾರ್ ಅವರು ‘ಭಕ್ತ ಪ್ರಹ್ಲಾದ’ ಚಿತ್ರವು ತೆಲುಗಿಗೆ ಡಬ್​ ಆದಾಗ ನಮ್ಮ ತಂದೆ, ಡಾ. ರಾಜ್​ಕುಮಾರ್​ ಅವರ ಪಾತ್ರಕ್ಕೆ ಡಬ್​ ಮಾಡಿದರೆ, ನಾನು ಅನಂತ್​ ನಾಗ್​ ಅವರ ನಾರದನ ಪಾತ್ರಕ್ಕೆ ಡಬ್​ ಮಾಡಿದ್ದೆ. ಈ ಚಿತ್ರವನ್ನು ನಾನು ಒಪ್ಪಿಕೊಳ್ಳುವುದಕ್ಕೆ ಮುಖ್ಯ ಕಾರಣ ಅನಂತ್​ ನಾಗ್​ ಮತ್ತು ಪ್ರಕಾಶ್​ ಬೆಳವಾಡಿ ಎಂದರೆ ತಪ್ಪಿಲ್ಲ. ಈ ಚಿತ್ರದಲ್ಲಿ ಅವರ ಜೊತೆಗೆ ನಟಿಸುವುದಕ್ಕೆ ಅವಕಾಶವಿಲ್ಲದಿದ್ದರೂ, ಅವರಿಬ್ಬರೂ ನಟಿಸಿರುವ ಚಿತ್ರದಲ್ಲಿ ನಾನೂ ಇದ್ದೇನೆ ಎನ್ನುವುದು ಖುಷಿ. ನಾನು ಡೈಲಾಗ್​ಗಳಿಗೆ ಬಹಳ ಜನಪ್ರಿಯ. ಆದರೆ, ಇಲ್ಲಿ ನನಗೆ ಸಂಭಾಷಣೆ ಕಡಿಮೆ. ಎಕ್ಸ್​ಪ್ರೆಶನ್​ಗಳು ಜಾಸ್ತಿ. ಬರೀ ಭಾವನೆಗಳ ಮೂಲಕ ಅಭಿವ್ಯಕ್ತಿ ಮಾಡುವಂತಹ ಪಾತ್ರ ನನ್ನದು. ಇತ್ತೀಚಿನ ವರ್ಷಗಳಲ್ಲಿ ಯುವ ನಿರ್ದೇಶಕರ ಚಿತ್ರಗಳಲ್ಲಿ ಹೆಚ್ಚುಹೆಚ್ಚು ಕೆಲಸ ಮಾಡುವುದಕ್ಕೆ ಅವಕಾಶ ಸಿಗುತ್ತಿವೆ” ಎಂದರು.

ಪ್ರಕಾಶ್ ಬೆಳವಾಡಿ ತಮ್ಮ ಪಾತ್ರದ ಪರಿಚಯ ಮಾಡಿಕೊಳುತ್ತಾ, ಈ ಕಥೆ ತುಂಬಾ ಚೆನ್ನಾಗಿದೆ. ಇಂತಹ ಸಿನಿಮಾಗಳ ನಿರ್ಮಾಣ ಜಾಸ್ತಿಯಾದರೆ ಕನ್ನಡ ಚಿತ್ರರಂಗದ ಹಿಂದಿನ ವೈಭವದ ದಿನಗಳು ಮತ್ತೆ ಮರುಕಳಿಸಲಿದೆ ಎಂದರು.

“ಕಥೆ ಕೇಳಿದ ನಾನು, ಸಮಾಜಕ್ಕೆ ಏನಾದರೂ ಉತ್ತಮ‌ ಸಂದೇಶ ನೀಡುವ ಸಲುವಾಗಿ ಈ ಚಿತ್ರ ನಿರ್ಮಾಣ ಮಾಡಿದ್ದೇನೆ” ಎನ್ನುವುದು ನಿರ್ಮಾಪಕ ಬಾಲಕೃಷ್ಣ ಅವರ ಮಾತು. ಪತ್ರಕರ್ತ, ಜನಪ್ರಿಯ ಬರಹಗಾರ ಜೋಗಿ ಅವರು ಸಹ ಈ ಸಮಾರಂಭಕ್ಕೆ ಆಗಮಿಸಿ ಬೆಂಗಳೂರು ಹಾಗೂ ತಮ್ಮ ನಡುವಿನ ಬಾಂಧವ್ಯ ವಿವರಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.

ಅಶ್ವಿನ್ ಪಿ ಕುಮಾರ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಭಜರಂಗ್ ಛಾಯಾಗ್ರಹಣ ಹಾಗೂ ಶಾಂತಕುಮಾರ್ ಅವರ ಸಂಕಲನ “ಮೇಡ್ ಇನ್ ಬೆಂಗಳೂರು” ಚಿತ್ರಕ್ಕಿದೆ. ಚಿತ್ರ ರಜನಿ ಥರ್ಸ್​ಡೇ ಸ್ಟೋರೀಸ್​ ಸಂಸ್ಥೆಯಡಿ ನಿರ್ಮಾಣವಾಗಿದೆ.

Exit mobile version