ಚಿಕ್ಕಮಗಳೂರು ನ 1 : ವಿಶ್ವದ ಅತ್ಯಂತ ಪ್ರಾಚೀನ ಹಾಗೂ ಶಾಸ್ತ್ರೀಯ ಭಾಷೆಗಳಲ್ಲಿ, ಕನ್ನಡ ನಾಡ ಭಾಷೆ ಒಂದಾಗಿದ್ದು, ನಾಡು ಹಾಗೂ ನುಡಿಯ ಅಭಿವ್ವ್ರುದ್ದಿಗೆ ಸರಕಾರ ಬದ್ದವಾಗಿದೆ, ಹಾಗೂ ರಾಜ್ಯ ಒಳಾಡಳಿತ ಇಲಾಖೆಯ ಆಡಳಿತ-ಭಾಷೆಯನ್ನು ಸಂಪೂರ್ಣ ಕನ್ನಡಮಯ ಗೊಳಿಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ಜಿಲ್ಲಾ ಆಡಳಿತ, ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ಇವರ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ, ತಾಯಿ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿ, ಧ್ವಜಾರೋಹಣ ನಡೆಸಿ ಮಾತನಾಡಿದರು.
ರಾಜ್ಯದ ಆಡಳಿತದಲ್ಲಿ ಸರಕಾರವು, ನಾಡ ನುಡಿ, ಕನ್ನಡ ಅನುಷ್ಠಾನದ ಬಗ್ಗೆ, ಬದ್ಧತೆ ಹೊಂದಿದ್ದು, ಅದರಂತೆಯೇ ಪೊಲೀಸ್ ಇಲಾಖೆಯಲ್ಲಿ ಸಂಪೂರ್ಣವಾಗಿ ಕನ್ನಡ ಭಾಷೆಯನ್ನು ಅನುಷ್ಠಾನಗೊಳಿಸುವ ಮಹತ್ವದ ಹೆಜ್ಜೆಯಲ್ಲಿ ಈಗಿನಿಂದಲೇ ಕವಾಯತಿಯಲ್ಲಿ ಬಳಸಲಾಗುವ ಆದೇಶವನ್ನು, ಕನ್ನಡ ಭಾಷೆಯಲ್ಲಿಯೇ ನಡೆಸಿಕೊಡಲಾಗುವುದು, ಮತ್ತು ಇದರ ಸಂಬಂಧ ಈಗಾಗಲೇ ಆದೇಶ ಹೊರಡಿಸಲಾಗಿದೆ,ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಕನ್ನಡದಲ್ಲಿ ಭಾಷಾಂತರಿಸಿ ರೂಪಿಸಿರುವ ಆದೇಶಗಳು ಎಲ್ಲ ರೀತಿಯಲ್ಲಿಯೂ ಕವಾಯತನ್ನು ನಿರ್ವಹಿಸಿಲು ಸಮರ್ಥವಾಗಿದ್ದು, ಈಗಾಗಲೇ ಪ್ರಾಯೋಗಿಕವಾಗಿ ನಡೆಸಲಾದ ಪ್ರಯತ್ನಗಳು ಯಶಸ್ವಿಯಾಗಿದೆ, ಎಂದು ಗೃಹ ಸಚಿವರು ತಿಳಿಸಿದರು.
ಈ ಸಂಬಂಧ ‘ ಕನ್ನಡದಲ್ಲಿ ಕವಾಯತು’ ಎಂಬ ಕೈಪಿಡಿಯನ್ನೂ ಸಿದ್ದಪಡಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.