ಐವರು ಸರಗಳ್ಳರ ಬಂಧನ: 3.52 ಲಕ್ಷ ರೂ, ಬೈಕ್‌ಗಳು ವಶಕ್ಕೆ

ಮಂಡ್ಯ, ಮಾ. 23: ನಾಲ್ಕು ಮಂದಿ ಸರಗಳ್ಳರು ಹಾಗೂ ಚಿನ್ನಾಭರಣ ಮಾರಲು ಸಹಕರಿಸುತ್ತಿದ್ದ ಒಬ್ಬ ಸೇರಿದಂತೆ ಐವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮದ್ದೂರು ಪಟ್ಟಣದ ರೂಹಿದ್ ಪಾಷಾ (24), ಶುಪಾಷಾ (24), ಇಮ್ರಾನ್‌ ಖಾನ್ (23), ಮತೀನ್ (20) ಹಾಗೂ ಕದ್ದ ವಸ್ತುವನ್ನು ಮಾರಲು ಸಹಾಯ ಮಾಡುತ್ತಿದ್ದ ರಾಮನಗರದ ಐಜೂರು ಗುಡ್ಡೆ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ ನೂರ್ ಅಹಮದ್ (23) ಬಂಧಿತರು. ಇವರಿಂದ 207 ಗ್ರಾಂ ಚಿನ್ನದ ಮಾಂಗಲ್ಯ ಸರಗಳು ಹಾಗೂ 3.52 ಲಕ್ಷ ರೂ. ನಗದು ಜತೆಗೆ ಕೃತ್ಯಕ್ಕೆ ಬಳಸುತ್ತಿದ್ದ 2 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲದರ ಒಟ್ಟು ಮೌಲ್ಯ 13 ಲಕ್ಷ ರೂ. ಆಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ ಮಾಹಿತಿ ನೀಡಿದರು.

ಮಾ.4ರಂದು ಕೆ.ಎಂ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣವನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ವಿ.ಧನಂಜಯ, ಮಳವಳ್ಳಿ ವಿಭಾಗದ ಡಿವೈಎಸ್ಪಿ ಲಕ್ಷ್ಮಿನಾರಾಯಣ ಮಾರ್ಗದರ್ಶನದಲ್ಲಿ ಕೆ.ಎಂ.ದೊಡ್ಡಿ ಇನ್‌ಸ್ಪೆಕ್ಟರ್ ಶಿವಮಲ್ಲಯ್ಯ, ಪಿಎಸ್‌ಐಗಳಾದ ಶೇಷಾದ್ರಿ ಕುಮಾರ್, ಮೋಹನ್ ಪಟೇಲ್, ಸಿಬ್ಬಂದಿ ಮಹೇಶ್, ಶ್ರೀನಿವಾಸ್, ಮೋಹನ್ ಕುಮಾರ್, ಚೇತನ್‌ಕುಮಾರ್ ಒಳಗೊಂಡ ವಿಶೇಷ ತಂಡ ರಚನೆ ಮಾಡಲಾಗಿತ್ತು. ನಂತರ ಕಳ್ಳತನಕ್ಕೆ ಸಂಬಂಧಿಸಿದಂತೆ ಸಿಸಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಚಿನ್ನಾಭರಣ ಕಳೆದುಕೊಂಡವರು ನೀಡಿದ ಮಾಹಿತಿ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿತು ಎಂದರು.

ರೂಹಿದ್ ಪಾಷಾ, ಶುಪಾಷಾ ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ಇಮ್ರಾನ್ ಖಾನ್ ಜನರೇಟರ್ ರಿಪೇರಿ ಹಾಗೂ ಮತೀನ್ ಮೊಬೈಲ್ ಸರ್ವೀಸ್ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್ ನಂತರ ಸರಗಳ್ಳತನ ಮಾಡಲು ಇವರು ಪ್ರಾರಂಭಿಸಿದ್ದು, ಗ್ರಾಮೀಣ ಭಾಗ ಅಥವಾ ರಸ್ತೆ ಇಲ್ಲದ ಕಡೆ ಬೈಕ್, ಸ್ಕೂಟರ್‌ನಲ್ಲಿ ನಿಧಾನವಾಗಿ ಹೋಗುವವರು, ಒಂಟಿಯಾಗಿ ಓಡಾಡುವವರನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ಒಂದೇ ದಿನ ಎರಡು ಕಡೆ ಸರಗಳ್ಳತನ ಮಾಡಿರುವುದು ಗೊತ್ತಾಗಿದೆ. ವಿಚಾರಣೆ ನಂತರ ಹಲಗೂರು, ಮದ್ದೂರು, ಮಂಡ್ಯ ಗ್ರಾಮಾಂತರ, ಕೆರಗೋಡು, ಕೆ.ಎಂ.ದೊಡ್ಡಿ, ಅರಕೆರೆ ಹಾಗೂ ಬೆಸಗರಹಳ್ಳಿ ಸೇರಿದಂತೆ ೧೩ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಹೇಳಿದರು.

ಸರಗಳ್ಳರ ಬಂಧನಕ್ಕೆ ಇನ್ನಷ್ಟು ಕ್ರಮ ವಹಿಸಲಾಗಿದೆ. ಸಾಮಾನ್ಯ ಚೆಕ್‌ಫೋಸ್ಟ್ ಜತೆಗೆ ವಿಶೇಷ ಚೆಕ್‌ಫೋಸ್ಟ್ ನಿರ್ಮಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಒಂಟಿಯಾಗಿ ಓಡಾಡುವವರಿಗೆ ಜಾಗೃತಿ ಮೂಡಿಸಲಾಗುವುದು. ಅಂತೆಯೇ ಎಲ್ಲಾದರೂ ಅನುಮಾನಸ್ಪದವಾಗಿ ವ್ಯಕ್ತಿಗಳು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

Exit mobile version