ಆಸೀಸ್ ವಿರುದ್ಧದ ತೃತೀಯ ಟೆಸ್ಟ್, ಡ್ರಾನಲ್ಲಿ ಅಂತ್ಯ

ಸಿಡ್ನಿ, ಜ. 11: ರಿಷಭ್ ಪಂತ್(97) ಹಾಗೂ ಚೇತೇಶ್ವರ್ ಪೂಜಾರ(77) ಅದ್ಭುತ ಬ್ಯಾಟಿಂಗ್ ಜತೆಗೆ ಹನುಮ ವಿಹಾರಿ(23) ಮತ್ತು ಅಶ್ವಿನ್(39) ರಕ್ಷಣಾತ್ಮಕ ಆಟದ ನೆರವಿನಿಂದ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ರೋಚಕ ಡ್ರಾನಲ್ಲಿ ಅಂತ್ಯಗೊಂಡಿತು.

ಸಿಡ್ನಿಯಲ್ಲಿ ನಡೆದ ಪಂದ್ಯದ 5ನೇ ದಿನದಾಟ ಭಾರತೀಯ ಬ್ಯಾಟಿಂಗ್ ಬಲ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಎರಡು ವಿಕೆಟ್‌ ಕಳೆದುಕೊಂಡು 98 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ, ಬಹುಬೇಗ ಮೂರನೇ ವಿಕೆಟ್‌ ಕಳೆದುಕೊಂಡಿತು. ಪ್ರಥಮ ಇನಿಂಗ್ಸ್‌ನಲ್ಲಿ ವಿಫಲರಾಗಿದ್ದ ನಾಯಕ ಅಜಿಂಕ್ಯ ರಹಾನೆ(4) ದ್ವಿತೀಯ ಇನಿಂಗ್ಸ್‌ನಲ್ಲಿಯೂ ನಿರಾಸೆ ಮೂಡಿಸಿದರು.

ನಂತರ ಜತೆಯಾದ ರಿಷಭ್‌ ಪಂತ್‌ ಹಾಗೂ ಚೇತೇಶ್ವರ್‌ ಪೂಜಾರ ಜೋಡಿ ಆಸ್ಟ್ರೇಲಿಯಾ ಬೌಲರ್‌ಗಳನ್ನು ದೀರ್ಘಕಾಲ ಬೆವರಿಳಿಸಿತು. ಒಂದು ಕಡೆ ಪಂತ್‌ ಸ್ಪೋಟಕ ಬ್ಯಾಟಿಂಗ್‌ ಮಾಡುತ್ತಿದ್ದರೆ, ಮತ್ತೊಂದು ತುದಿಯಲ್ಲಿ ಪೂಜಾರ ತಾಳ್ಮೆಯ ಬ್ಯಾಟಿಂಗ್‌ ಮಾಡುತ್ತಿದ್ದರು. ಈ ಜೋಡಿಯ ಅದ್ಭುತ ಜತೆಯಾಟದಿಂದ ಭಾರತ ನಾಲ್ಕನೇ ವಿಕೆಟ್‌ಗೆ 148 ರನ್‌ ಕಲೆ ಹಾಕಿತು. ಆ ಮೂಲಕ ಭಾರತದ ಮೊತ್ತ 250ರ ಗಡಿ ದಾಟಲು ನೆರವಾಯಿತು.

ಉತ್ತಮ ಬ್ಯಾಟಿಂಗ್ ಮೂಲಕ ತಂಡಕ್ಕೆ ಗೆಲುವಿನ ಅವಕಾಶ ಸುಲಭವಾಗಿಸಿದ್ದ ಪಂತ್, 97 ರನ್‌ಗಳಿಸಿದ್ದ ವೇಳೆ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಇವರ ಬೆನ್ನಲ್ಲೇ ಪೂಜಾರ ಸಹ 77 ರನ್‌ಗಳಿಗೆ ಔಟ್ ಆದರು. ಈ ಹಂತದಲ್ಲಿ ಜೊತೆಯಾದ ಹನುಮ ವಿಹಾರಿ ಹಾಗೂ ರವಿಚಂದ್ರನ್ ಅಶ್ವಿನ್, ಕಾಂಗರೂ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದರು.

ರಕ್ಷಣಾತ್ಮಕ ಆಟವಾಡಿದ ಈ ಇಬ್ಬರು, 6ನೇ ವಿಕೆಟ್‌ಗೆ 256 ಎಸೆತಗಳಲ್ಲಿ ಮುರಿಯದ 62 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಆ ಮೂಲಕ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಭಾರತ-ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು 1—1 ಸಮಬಲ ದಾಖಲಿಸಿವೆ. ಎರಡೂ ತಂಡಗಳ‌ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಜ.15ರಿಂದ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ.

Exit mobile version