ಅಸ್ಸಾಂ ಪ್ರವಾಹ ; ಪ್ರವಾಹದಲ್ಲಿ 10 ಮಂದಿ ಸಾವು, 34 ಜಿಲ್ಲೆಗಳಲ್ಲಿ 47 ಲಕ್ಷಕ್ಕೂ ಹೆಚ್ಚು ಸಂತ್ರಸ್ತರ ಜೀವನ ಅಸ್ತವ್ಯಸ್ತ!

ಅಸ್ಸಾಂ(Assam) ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಕಾರ ಮಳೆಯಿಂದ ಪ್ರವಾಹ(Flood) ಉಂಟಾಗಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ ಪ್ರವಾಹದಿಂದಾಗಿ ಇಬ್ಬರು ಪೊಲೀಸರು ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದರಿಂದ ಅಸ್ಸಾಂ ರಾಜ್ಯ ಪರಿಸ್ಥಿತಿ ವಿಕೋಪಕ್ಕ ತಿರುಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ರಾಜ್ಯದ ಎಲ್ಲಾ 34 ಜಿಲ್ಲೆಗಳು ಪ್ರವಾಹದ ಬಿಕ್ಕಟ್ಟಿಗೆ ಸಿಲುಕಿವೆ ಎನ್ನಲಾಗಿದೆ.

ಕೊಪಿಲಿ ನದಿಯ ಪ್ರವಾಹದಲ್ಲಿ ಸಿಲುಕಿ ನಲುಗಿದ ಜನರನ್ನು ರಕ್ಷಿಸಲು ಯತ್ನಿಸುತ್ತಿದ್ದಾಗ ಒಬ್ಬ ಪೊಲೀಸ್ ಅಧಿಕಾರಿ ಮತ್ತು ಒಬ್ಬ ಕಾನ್‌ಸ್ಟೆಬಲ್ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದಾರೆ. ಅಸ್ಸಾಂನಲ್ಲಿ ನಡೆಯುತ್ತಿರುವ ಪ್ರವಾಹ ಮತ್ತು ಭೂಕುಸಿತದಲ್ಲಿ ಮಂಗಳವಾರ 80 ಜನರು ಸಿಲುಕಿದ್ದಾರೆ ಎನ್ನಲಾಗಿದೆ. ಪ್ರವಾಹ ಪೀಡಿತ ಅಸ್ಸಾಂನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇದುವರೆಗೆ 47 ಲಕ್ಷಕ್ಕೂ ಹೆಚ್ಚು ಸಂತ್ರಸ್ತರು ಪರದಾಡುತ್ತಿದ್ದಾರೆ. ಸೋಮವಾರ ಏಳು ಮಂದಿ ನಾಪತ್ತೆಯಾಗಿದ್ದು, 2.3 ಲಕ್ಷ ಮಂದಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಒಟ್ಟಾರೆಯಾಗಿ, ಎಲ್ಲಾ ಪೀಡಿತ ಪ್ರದೇಶಗಳಲ್ಲಿ 810 ಪರಿಹಾರ ಶಿಬಿರಗಳು ಮತ್ತು 615 ಪರಿಹಾರ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ. ಅಸ್ಸಾಂ ಪ್ರವಾಹದಿಂದ ಪ್ರಭಾವಿತವಾಗಿರುವ 47 ಲಕ್ಷ ಜನರಲ್ಲಿ ಅರ್ಧದಷ್ಟು ಜನರು ನಾಲ್ಕು ಪಶ್ಚಿಮ ಜಿಲ್ಲೆಗಳಾದ ಬಾರ್ಪೇಟಾ, ಬಕ್ಸಾ, ಗೋಲ್ಪಾರಾ ಮತ್ತು ಕಾಮ್ರೂಪ್‌ಗೆ ಸೇರಿದವರು ಎಂದು ಹೇಳಲಾಗುತ್ತಿದೆ. ಬಾರ್ಪೇಟಾದ ಒಟ್ಟು ಪ್ರದೇಶದ ಸುಮಾರು 21 ಪ್ರತಿಶತದಷ್ಟು ಪ್ರದೇಶವು ಪ್ರವಾಹಕ್ಕೆ ಸಿಲುಕಿದೆ.

ಬ್ರಹ್ಮಪುತ್ರ, ಕೊಪಿಲಿ, ಬೇಕಿ, ಪಗ್ಲಾಡಿಯಾ, ಪುತಿಮರಿ ಎಂಬ ಐದು ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಒಟ್ಟು 1,13,485.37 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, 5,000 ಕ್ಕೂ ಹೆಚ್ಚು ಜನ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ ಎನ್ನಲಾಗಿದೆ.

Exit mobile version