‘ಅವಲಕ್ಕಿ ಪವಲಕ್ಕಿ’ ಟ್ರೇಲರ್ ಗೆ ಮೆಚ್ಚುಗೆ

ಪ್ರಣವ್ ಪಿಕ್ಚರ್ಸ್ ಲಾಂಛನದಲ್ಲಿ ರಂಜಿತಾ ಸುಬ್ರಹ್ಮಣ್ಯ ಅವರು ನಿರ್ಮಿಸಿರುವ ‘ಅವಲಕ್ಕಿ ಪವಲಕ್ಕಿ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಒಂದು ವಾರದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ. ಟ್ರೇಲರ್ ಗೆ ಅಪಾರ ಮೆಚ್ಚುಗೆಯೂ ದೊರಕಿದೆ. ಈ ಸಂತಸವನ್ನು ಚಿತ್ರತಂಡ ಮಾಧ್ಯಮದ ಮುಂದೆ ಹಂಚಿಕೊಂಡಿದೆ.

ನಿರ್ದೇಶಕ ದುರ್ಗಾಪ್ರಸಾದ್ ಮಾತನಾಡಿ, “ನಾನು ಹೈದರಾಬಾದ್ ಮೂಲದವನು. ಇದು ನನ್ನ ಮೊದಲ ಚಿತ್ರ. ವಿಭಿನ್ನ ಕಥೆಯಿಟ್ಟುಕೊಂಡು ಸಿನಿಮಾ ನಿರ್ದೇಶಿಸಿದ್ದೇನೆ. ಈ ಚಿತ್ರದ ಕಥೆ ಮಕ್ಕಳ ಮೇಲೆ ಹೆಣೆಯಲಾಗಿದೆ. ಆದರೆ ಇದು ಪೂರ್ತಿ ಮಕ್ಕಳ ಚಿತ್ರವಲ್ಲ. ಸಿನಿಮಾವು ಈಗಾಗಲೇ ಅನೇಕ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿದೆ ಹಾಗೂ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಸದ್ಯದಲ್ಲೇ ನಿಮ್ಮ ಮುಂದೆ ಬರಲಿದೆ ನೋಡಿ ಹರಸಿ” ಎಂದರು. ಚಿತ್ರದ ನಿರ್ಮಾಪಕಿ ರಂಜಿತಾ ಸುಬ್ರಹ್ಮಣ್ಯ ಅವರು
“ಕಥೆ ಇಷ್ಟವಾದ ಕಾರಣ ಸಿನಿಮಾ ಮಾಡಲು ಮುಂದಾದೆವು. ಹೆಬ್ರಿ ಕಾಡಿನಲ್ಲೇ ಇಪ್ಪತ್ತು ದಿನಗಳ ಚಿತ್ರೀಕರಣ ಮಾಡಿದ್ದ ಅನುಭವ ಮರೆಯಲು ಸಾಧ್ಯವೇ ಇಲ್ಲ. ಏನು ಸಿಗದ ಜಾಗದಲ್ಲಿ ಯಾವುದಕ್ಕೂ ‌ಕೊರತೆ ಬರದ ಹಾಗೆ ಚಿತ್ರೀಕರಣವಾಗಿದೆ ಅಂದರೆ ಅದಕ್ಕೆ ಚಿತ್ರತಂಡದ ಪ್ರೋತ್ಸಾಹವೇ ಪ್ರಮುಖ ಕಾರಣ ಎನ್ನುತ್ತಾರೆ ಇಪ್ಪತ್ತೈದು ವರ್ಷ ವಯಸ್ಸಿನ ಒಳಗಿನ ಉತ್ಸಾಹಿಗಳೇ ಈ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲೂ ಹೆಚ್ಚಿನವರು ರಂಗಭೂಮಿಯಲ್ಲಿ ಅನುಭವ ಹೊಂದಿರುವವರು” ಎನ್ನುತ್ತಾರೆ.

ಸಂಗೀತ ನಿರ್ದೇಶಕ ಜುಬಿನ್ ಪಾಲ್ ಚಿತ್ರದ ಹಾಡುಗಳ ಹಾಗೂ ಹಾಡಿದವರ ಬಗ್ಗೆ ವಿವರಣೆ ನೀಡಿದರು. ಸಹ ನಿರ್ದೇಶಕ ಸಂದೀಪ್ ಅಯ್ಯರ್ ಚಿತ್ರ ಸಾಗಿ ಬಂದ ಹಾದಿಯ ಬಗ್ಗೆ ಮಾತನಾಡಿದರು.

ಕಲಾವಿದರಾದ ಇಂದಿರಾ ನಾಯರ್, ರಾಘವೇಂದ್ರ, ಸಿಂಚನಾ, ಪ್ರವೀಣ್, ಪ್ರಿಯಾ ಶಂಕರ್, ಉದಯಕುಮಾರ್, ನಾಗರಾಜ್ ಭಂಡಾರಿ ಹಾಗೂ ಛಾಯಾಗ್ರಹಕ ನಿರೀಕ್ಷಿತ್ ತಮ್ಮ ಅನುಭವ ಹಂಚಿಕೊಂಡರು. ವಿನೋದ್, ಅನೂಪ್ ಹಾಗೂ ಸುಖೇಶ್ ಸಹ ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Exit mobile version