ಪ್ರೇಕ್ಷಕರನ್ನು `ವಶೀಕರಣ’ಗೊಳಿಸಿದ ಅವತಾರ ಪುರುಷ!

sharan

ಕನ್ನಡ ಚಿತ್ರರಂಗದ ಅಧ್ಯಕ್ಷ ಶರಣ್(Sharan), ಮುದ್ದು ಮೊಗದ ಚೆಲುವೆ ನಟಿ ಆಶಿಕಾ ರಂಗನಾಥ್(Ashika Ranganath) ಮುಖ್ಯಭೂಮಿಕೆಯಲ್ಲಿ ನಟಿಸಿರುವ ಅವತಾರ ಪುರುಷ(Avathara Purusha) ಸಿನಿಮಾ(Cinema) ರಿಲೀಸ್ ಆಗಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದೆ.


ಹೌದು, ನಿರ್ದೇಶಕ(Director) ಸಿಂಪಲ್‌ ಸುನಿ(Simple Suni) ಅವರ ಹೊಸ ಪ್ರಯೋಗ ‘ಅವತಾರ ಪುರುಷ–ಅಷ್ಟದಿಗ್ಬಂಧನ ಮಂಡಲಕ’ ಪ್ರೇಕ್ಷಕರೆದುರಿಗೆ ಹಾಜರಾಗಿದೆ. ಶರಣ್ ಅವರ ಸಿನಿಮಾ ಅಂದ್ರೆ ಕೇವಲ ಕಾಮಿಡಿ ಎನ್ನುವ ಅಭಿಪ್ರಾಯವನ್ನೇ ಸವಾಲಾಗಿ ತೆಗೆದುಕೊಂಡ ಸಿಂಪಲ್ ಸುನಿ ಅಧ್ಯಕ್ಷನ ನಟನಾ ಚಾತುರ್ಯತೆಯನ್ನು ಈ ಸಿನಿಮಾ ಮೂಲಕ ಜನರಿಗೆ ಪರಿಚಯಿಸಿದ್ದಾರೆ.


ಜೂನಿಯರ್ ಆರ್ಟಿಸ್ಟ್ ಪಾತ್ರಕ್ಕೆ ಜೀವ ತುಂಬಿರುವ ಶರಣ್ ಅವರು, ನಿಜವಾಗ್ಲೂ ಜೂನಿಯರ್ ಆರ್ಟಿಸ್ಟಾ ಅಥವಾ ವಿಶೇಷ ವಿದ್ಯೆಗಳನ್ನ ಕಲಿತಿರೋ ಮಾಯಾವಿನಾ ಅನ್ನೋ ಗಲಿಬಿಲಿ ಒಂದು ಹಂತದಲ್ಲಿ ಪ್ರೇಕ್ಷಕರಿಗೆ ಮೂಡುತ್ತದೆ. ಸಿರಿ ಪಾತ್ರದಲ್ಲಿ ಆಶಿಕಾ ರಂಗನಾಥ್‌ ಮುದ್ದಾಗಿ ಅಭಿನಯಿಸಿ ಶರಣ್ ಗೆ ತಕ್ಕ ನಾಯಕಿ ಎನಿಸಿಕೊಂಡಿದ್ದಾರೆ. ಹದವಾದ ಹಾಸ್ಯ ಆಗಾಗ ಪ್ರೇಕ್ಷಕರನ್ನು ಸೀರಿಯಸ್ ಮೋಡ್ ನಿಂದ ಹೊರಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದೆ.


ಇತ್ತ ಸಣ್ಣ ಪ್ರಾಯದಲ್ಲೇ ಮಗ ಕಾಣೆಯಾದ ದುಃಖದಲ್ಲಿ ಬದುಕುತ್ತಿರುವ ರಾಮ ಜೊಯೀಸ್‌ ಪಾತ್ರದಲ್ಲಿ ಸಾಯಿಕುಮಾರ್‌ ಹಾಗೂ ಸುಶೀಲ ಪಾತ್ರದಲ್ಲಿ ಭವ್ಯಾ ದಂಪತಿ ನಟಿಸಿದ್ದಾರೆ. ಕರ್ಣ ಕಾಣೆಯಾಗಲು ತಂಗಿಯೇ ಕಾರಣ. ಹೀಗಾಗಿ ಅನಿಲ(ಶರಣ್) ಮೂಲಕ ಒಡೆದ ಸಂಬಂಧವನ್ನು ಮತ್ತೆ ಜೋಡಿಸುವ ತಂತ್ರ ಸಿರಿಯದ್ದು. ಆದರೆ ಪ್ರೇಕ್ಷಕನ ವಶೀಕರಣಕ್ಕೆ ಅಧ್ಯಕ್ಷನ ಕಾಮಿಡಿ ಇನ್ನೊಂದಿಷ್ಟು ಬೇಕಾಗಿತ್ತು ಅನಿಸುತ್ತದೆ. ಸುನಿ ಡೈಲಾಗ್ಸ್‌ಗೆ ಜೀವ ತುಂಬಿ ಧ್ವನಿಯಾಗಿದ್ದಾರೆ ಶರಣ್‌. ಅವರ ಹೊಸ ಅವತಾರವೊಂದು ಕ್ಲೈಮ್ಯಾಕ್ಸ್‌ನಲ್ಲಿದೆ.

ಹೀರೊ ಹೋಂಡಾ ಹಾಡಿನಲ್ಲಿ ಆಶಿಕಾ ಡ್ಯಾನ್ಸ್‌ ಪ್ರೇಕ್ಷಕರನ್ನು ಹುಚ್ಚೆಬ್ಬಿಸುತ್ತೆ. ಸಾಯಿಕುಮಾರ್‌ ಅವರ ಪಾತ್ರದ ಬಗ್ಗೆ ಹೇಳಬೇಕಾಗಿಯೇ ಇಲ್ಲ. ಅವರ ಮಾತು, ನಟನೆ ಅದ್ಬುತ. ಆದರೆ ಭವ್ಯಾ ಅವರ ಪಾತ್ರ ಸಾಯಿಕುಮಾರ್‌ ಪಾತ್ರದ ಎದುರಿಗೆ ಸ್ವಲ್ಪ ಮಂಕಾದಂತೆ ಅನಿಸುತ್ತೆ. ಕ್ಲೈಮ್ಯಾಕ್ಸ್‌ನಲ್ಲಿ ಪ್ರವೇಶಿಸುವ ನಟ ಶ್ರೀನಗರ ಕಿಟ್ಟಿ ಅಲ್ಪಾವದಿಯಲ್ಲೇ ಪ್ರೇಕ್ಷಕರನ್ನು ಮೋಡಿ ಮಾಡ್ತಾರೆ.


ಅರ್ಧಂಬರ್ಧ ಮಾಟ, ಮಂತ್ರ ಕಲಿತ ಮಾಟಗಾರನ ಪಾತ್ರದಲ್ಲಿ ಮನರಂಜಿಸುವ ನಟ ಸಾಧುಕೋಕಿಲ ಮತ್ತೊಂದಿಷ್ಟು ಸಮಯ ತೆರೆ ಮೇಲೆ ಇರಬೇಕಿತ್ತು ಅನ್ಸುತ್ತೆ. ಸುಧಾರಾಣಿ, ಅಶುತೋಷ್‌ ರಾಣಾ, ಬಾಲಾಜಿ ಮನೋಹರ್, ಬಿ.ಸುರೇಶ್‌ ಪಾತ್ರಗಳು ಅಚ್ಚುಕಟ್ಟಾಗಿವೆ. ಛಾಯಾಗ್ರಾಹಕ ವಿಲಿಯಂ ಡೇವಿಡ್‌ ಹಾಗೂ ಅರ್ಜುನ್‌ ಜನ್ಯ ಅವರ ಕೈಚಳಕ ಮೊದಲ ಭಾಗದಲ್ಲಿ ಸಖತ್ತಾಗಿದೆ. ಒಟ್ಟಾರೆ ಕುಟುಂಬ ಸಮೇತ ಹೋಗಿ ನೋಡುವಂತ ಸಿನಿಮಾ ಅವತಾರ ಪುರುಷ.

Exit mobile version