ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ ಮೂಡಿಗೆರೆಯ ಪೋರಿ

ಚಿಕ್ಕಮಗಳೂರು ಅ 11 : ತನ್ನ ತೀಕ್ಷ್ಣ ನೆನಪಿನ ಶಕ್ತಿಯಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಕೂಡಹಳ್ಳಿ ಗ್ರಾಮದ ಮೂರು ವರ್ಷದ ಪುಟ್ಟ ಪೋರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿ ದಾಖಲೆ ನಿರ್ಮಿಸಿದ್ದಾಳೆ.

ಮೂರು ವರ್ಷದ ಬಾಲಕಿ ಆರ್ವಿ.ಎಸ್ ತೀಕ್ಷ್ಣ ನೆನೆಪಿನ ಶಕ್ತಿಯಿಂದ ಇಂಡಿಯಾ ಬುಕ್ ಆಪ್ ರೆಕಾರ್ಡ್‍ಗೆ ಆಯ್ಕೆಯಾಗಿದ್ದಾಳೆ. ಆನ್‍ಲೈನ್ ಮೂಲಕ ನಡೆದ ಪರೀಕ್ಷೆಯಲ್ಲಿ ತನ್ನ ಅಸಾಧಾರಣೆ ಪ್ರತಿಭೆ ಹಾಗೂ ನೆನಪಿನ ಶಕ್ತಿಯನ್ನು ಅನಾವರಣಗೊಳಿಸಿದ್ದಾಳೆ. ಪರೀಕ್ಷೆಯಲ್ಲಿ ಕನ್ನಡ ಮತ್ತು ಹಿಂದಿ ಸಂಖ್ಯೆಗಳು, 19 ವಿವಿಧ ವಾಹನಗಳು, ಕನ್ನಡ ಮತ್ತು ಇಂಗ್ಲೀಷ್ ವರ್ಣಮಾಲೆಗಳು, ಇಂಗ್ಲೀಷ್ ಸಂಖ್ಯೆಗಳು, ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲೂ ದಿನಗಳು, ತಿಂಗಳುಗಳ ಹೆಸರುಗಳನ್ನು ನಿರರ್ಗಳವಾಗಿ ಹೇಳುತ್ತಾಳೆ. 12 ಬಣ್ಣಗಳು, 9 ಆಕಾರಗಳು, 13 ಹಣ್ಣುಗಳು, 15 ತರಕಾರಿಗಳು, 37 ಪ್ರಾಣಿಗಳು, ಏಳು ಇಂಗ್ಲೀಷ್ ಪದ್ಯಗಳು, 7 ಪ್ರಾಣಿಗಳ ಧ್ವನಿಯನ್ನು ಅನುಕರಣೆ ಮಾಡುವ ಮೂಲಕ ತನ್ನ ಅಸಾಧಾರಣ ಪ್ರತಿಭೆಯ ಮೂಲಕ ಬಾಲ್ಯದಲ್ಲೇ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿದ್ದಾಳೆ. ಮಗಳ ಸಾಧನೆ ಕಂಡು ನಮಗೂ ತೀವ್ರ ಸಂತೋಷವಾಗಿದೆ ಎಂದು ಆರ್ವಿಯ ತಾಯಿ ಸ್ಮಿತಾ ಶಾಶ್ವತ್ ತಿಳಿಸಿದ್ದಾರೆ.

ನಮ್ಮ ಮಗಳು ಆರ್ವಿ ಒಂದು ವರ್ಷ ತುಂಬಿದ ಮಗುವಾಗಿದ್ದಾಗಲೇ ತುಂಬಾ ಚೂಟಿಯಿಂದ ಇದ್ದಳು. ನಾವು ಏನು ಹೇಳಿದರೂ ನೆನಪಿಡುವ ಗುಣ ಹೊಂದಿದ್ದ ಅವಳಿಗೆ ಅಭ್ಯಾಸ ಮಾಡಿಸಿದ್ದೇವು. ಅದು ಅವಳಿಗೆ ಪ್ರಶಸ್ತಿ ದೊರೆಯಲು ಕಾರಣವಾಯಿತು ಎಂದು ಆರ್ವಿ ತಾಯಿ ಮಗಳ ಸಾಧನೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 3 ವರ್ಷದ ಮಗುವಿನ ನೆನಪಿನ ಶಕ್ತಿ ಕಂಡು ಸ್ಥಳೀಯರು ಕೂಡ ಆಶ್ಚರ್ಯಚಕಿತರಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 3ರ ಪೋರಿ ಆರ್ವಿ ಬಣಕಲ್ ಸಮೀಪದ ಕೂಡಹಳ್ಳಿಯ ಕೆ.ಎಸ್.ಶಾಶ್ವತ್ ಹಾಗೂ ಸ್ಮಿತಾ ದಂಪತಿಯ ಪುತ್ರಿಯಾಗಿದ್ದಾಳೆ.

Exit mobile version