ಬೆಳಗಾವಿಯಲ್ಲಿ ಪುಂಡಾಟ ನಡೆಸಿದ್ದ 27 ಜನರ ಬಂಧನ 14 ದಿನ ನ್ಯಾಯಾಂಗ ವಶಕ್ಕೆ

ಬೆಳಗಾವಿ ಡಿ 18: ನಗರದಲ್ಲಿ ನಿನ್ನೆ ರಾತ್ರಿ ಸಂಗೊಳ್ಳಿ ರಾಯಣ್ಣ ಪುತ್ತಳಿಗೆ ಹಾನಿಯುಂಟುಮಾಡಿ ನಗರದಲ್ಲಿ ಪುಂಡಾಟ ನಡೆಸಿದ್ದ 27 ಮಂದಿ MES ಪುಂಡರನ್ನು ಬಂಧಿಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. 

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಎಂಇಎಸ್ ಪುಂಡರು ಬೆಳಗಾವಿಯಲ್ಲಿ ಧ್ವಂಸಗೊಳಿಸಿ, ವಿರೂಪಗೊಳಿಸಿದಂತ ಘಟನೆ ನಿನ್ನೆ ತಡರಾತ್ರಿ ನಡೆದಿದ್ದು, ಈ ಘಟನೆಯನ್ನು ರಾಜಕೀಯ ನಾಯಕರು ಸೇರಿದಂತೆ ಸಿಎಂ ಕೂಡ ಈ ಘಟನೆಯನ್ನು ಖಂಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತ ಎಚ್ಚರಿಕೆ ನೀಡಿದ್ದಾರೆ.

ಇದರ ಬೆನ್ನಲ್ಲೇ, ಪೊಲೀಸರು 27 ಎಂಇಎಸ್ ಪುಂಡರನ್ನು ಬಂಧಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದಂತ ಡಿಸಿಪಿ ವಿಕ್ರಂ ಆಮ್ಟೆ ಅವರು, 4 ಕಡೆಗಳಲ್ಲಿ ಘಟನೆ ಸಂಬಂಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಇಲ್ಲಿಯವರೆಗೆ 27 ಜನರನ್ನು ಪ್ರಕರಣ ಸಂಬಂಧ ಬಂಧಿಸಲಾಗಿದೆ ಎಂದಿದ್ದರು. ಇನ್ನೂ ನಗರದಲ್ಲಿ ಬೆಳಿಗ್ಗೆಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇವತ್ತು ಮತ್ತು ನಾಳೆ ಯಾವುದೇ ಪ್ರತಿಭಟನೆಗೆ ಅವಕಾಶ ನೀಡೋದಿಲ್ಲ. ಜನರು ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದರು.

ಈ ಸಂಬಂಧ ಪೊಲೀಸರು ಬಂಧಿಸಲಾಗಿದ್ದಂತ 27 ಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಪ್ರಕರಣ ಕುರಿತಂತೆ ವಿಚಾರಣೆ ನಡೆಸಿದಂತ ನ್ಯಾಯಾಧೀಶರು ಬೆಳಗಾವಿಯಲ್ಲಿ ಪುಂಡಾಟ ಮೆರೆದಂತ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದರಿಂದಾಗಿ ಪುಂಡಾಟ ತೋರಿದಂತ ಪುಂಡರು ಜೈಲುಪಾಲು ಆಗುವಂತೆ ಆಗಿದೆ.

Exit mobile version