ದೇಶದ ಐದು ಕಡೆಗಳಲ್ಲಿ ಐಪಿಎಲ್ ಟೂರ್ನಿ ಆಯೋಜನೆಗೆ ಬಿಸಿಸಿಐ ಚಿಂತನೆ

ಬೆಂಗಳೂರು, ಫೆ. 27: ಮಹಾಮಾರಿ ಕೊರೊನಾ ಸೋಂಕಿನ ಕಾರಣದಿಂದ ಕಳೆದ ಬಾರಿ ಅರಬ್ ರಾಷ್ಟ್ರಕ್ಕೆ(ಯುಎಇ) ಸ್ಥಳಾಂತರಗೊಂಡಿದ್ದ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿ ಈ ಬಾರಿ ಭಾರತದಲ್ಲೇ ನಡೆಯಲಿದೆ‌.

ಮುಂಬರುವ ಐಪಿಎಲ್ ಟೂರ್ನಿಗೆ ಈಗಾಗಲೇ ಸಿದ್ಧತೆ ಆರಂಭಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಚುಟುಕು ಕ್ರಿಕೆಟ್ ಟೂರ್ನಿಯನ್ನು 5 ಸ್ಥಳಗಳಲ್ಲಿ ನಡೆಸಲು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಚೆನ್ನೈ, ಕೊಲ್ಕತ್ತಾ, ಅಹಮದಾಬಾದ್, ದೆಹಲಿ ಹಾಗೂ ಬೆಂಗಳೂರು ನಗರಗಳನ್ನು ಬಿಸಿಸಿಐ ತಾತ್ಕಾಲಿಕವಾಗಿ ಗುರುತಿಸಿದೆ. ಆದರೆ ಮುಂಬೈನಲ್ಲಿ ಪಂದ್ಯ ನಡೆಸುವ ಕುರಿತು ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದ ಬಳಿಕವಷ್ಟೇ ಅಂತಿಮ ತೀರ್ಮಾನ ತಿಳಿಯಲಿದೆ.

ಮಹಾರಾಷ್ಟ್ರದಲ್ಲಿ ಎರಡನೇ ಹಂತದ ಕೊರೊನಾ ಅಲೆಯ ಆತಂಕ ಶುರುವಾಗಿದೆ. ಹೀಗಾಗಿ ಮುಂಬೈನಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸ್ಥಳೀಯ ಸರ್ಕಾರ ಯಾವುದೇ ಅನುಮತಿ ನೀಡಿಲ್ಲ. ಈ ನಡುವೆ ಉತ್ತರ ಪ್ರದೇಶದ ಲಖನೌ ನಗರದಲ್ಲಿ ಸಹ ಐಪಿಎಲ್ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆ ಹೆಚ್ಚಾಗಿದ್ದರು, ಇದು ಖಚಿತವಾಗಿಲ್ಲ. ಮತ್ತೊಂದೆಡೆ ಪಂಚ ರಾಜ್ಯಗಳ ಚುನಾವಣಾ ದಿನಾಂಕ ಸಹ ಪ್ರಕಟಗೊಂಡಿದೆ. ಪರಿಣಾಮ ಕೊಲ್ಕತ್ತಾದಲ್ಲಿ ಪಂದ್ಯ ನಡೆಸುವ ಬಗ್ಗೆಯೂ ಸ್ಪಷ್ಟ ಚಿತ್ರಣ ಲಭಿಸಿಲ್ಲ. ಈ ಬಾರಿಯ ಐಪಿಎಲ್ ಟೂರ್ನಿ ಏಪ್ರಿಲ್ 10ರಿಂದ ಆರಂಭಗೊಳ್ಳುವ ಸಾಧ್ಯತೆ ಇದೆ.

Exit mobile version