ಚಿಕ್ಕಮಗಳೂರು, ಆ. 11: ಕಳೆದ ಮಾರ್ಚ್ ಹಾಗೂ ಏಪ್ರಿಲ್ ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅವಧಿಗೂ ಮುನ್ನವೇ ಅರೆಬಿಕಾ ಕಾಫಿ ಹಣ್ಣಾಗಲು ಆರಂಭಿಸಿದ್ದು ಇದರಿಂದಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಸಾಮಾನ್ಯವಾಗಿ ನವೆಂಬರ್ ತಿಂಗಳಿನಲ್ಲಿ ಅರೆಬಿಕಾ ಕಾಫಿ ಕೊಯ್ಲಿಗೆ ಬರುತ್ತಿತ್ತು. ಅದರೆ ಈ ಬಾರಿ ಏಪ್ರಿಲ್ ಹಾಗೂ ಮೇನಲ್ಲಿ ಉತ್ತಮ ಮಳೆಯಾದ ಪರಿಣಾಮ ಆ ಸಮಯದಲ್ಲೇ ಕಾಫಿ ಹೂವಾಗಲು ಆರಂಭಿಸಿತ್ತು ಜೊತೆಗೆ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲೂ ಕೂಡ ಇದ್ದರು. ಆದರೆ ಇದೀಗ ಅರೆಬಿಕಾ ಕಾಫಿ ಸುಮಾರು ಶೇ 50% ಫಸಲು ಕೊಯ್ಲಿಗೆ ಬಂದಿದೆ. ಕೇವಲ ಅರ್ಧದಷ್ಟು ಮಾತ್ರ ಫಸಲು ಕೊಯ್ಲಿಗೆ ಬಂದಿರುವ ಕಾರಣ ಅದನ್ನು ಕೊಯ್ಲು ಮಾಡಲು ಇದೀಗ ಕೂಲಿ ಆಳುಗಳು ಕೂಡ ಸಿಗುತ್ತಿಲ್ಲ ಜೊತೆಗೆ ಪ್ರಸ್ತುತ ಮಳೆಗಾಲ ಆಗಿರುವುದರ ಕಾರಣ ಅದನ್ನು ಒಣಗಿಸಲು ಕೂಡ ತೊಂದರೆಯಾಗಲಿದೆ. ಜೊತೆಗೆ ಈಗ ಬಂದಿರುವ ಫಸಲನ್ನು ಗಿಡದಿಂದ ಬೇರ್ಪಡಿಸದೆ ಹಾಗೆ ಬಿಟ್ಟರೆ ಕೊಳೆ ರೋಗ ಬರುವ ಸಾಧ್ಯತೆ ಕೂಡ ಇದೆ. ಇದನ್ನು ಈಗ ಕೊಯ್ಲು ಮಾಡಿದರೆ ಫಸಲಿಗಿಂತ ಹೆಚ್ಚು ಹಣ ಕೂಲಿಯವರಿಗೆ ನೀಡಬೇಕಾಗುತ್ತದೆ. ಒಟ್ಟಿನಲ್ಲಿ ಅವಧಿಗೂ ಮುನ್ನ ಬಂದ ಫಸಲಿನಿಂದ ಕಾಫಿನಾಡಿನ ಬೆಳೆಗಾರರು ಸಮಸ್ಯೆ ಅನುಭವಿಸುತ್ತಿದ್ದಾರೆ.