ಮಾರ್ಚ್ 3 ರಿಂದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ.!

ಬೆಂಗಳೂರು ಜ 28 : ಮಾರ್ಚ್ 3 ರಿಂದ 13ರ ವರೆಗೆ 10 ದಿನಗಳ ಕಾಲ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಇದಕ್ಕೆ ಈಗಾಗಲೇ ರಾಜ್ಯ ಸರ್ಕಾರ ಕೂಡ ಅನುಮತಿ ನೀಡಿದೆ.
ಇಂದು ಸಿ.ಎಂ ಗೃಹ ಕಚೇರಿ ಕೃಷ್ಣಾದಲ್ಲಿ 13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಚಲನಚಿತ್ರೋತ್ಸವಕ್ಕೆ ಸಿಎಂ ಕೊರೊನಾ ಷರತ್ತಿನೊಂದಿಗೆ ಆಚರಣೆಗೆ ಒಪ್ಪಿಗೆ ನೀಡಿದ್ದಾರೆ. ಇದೇ ಸಮಯದಲ್ಲಿ ಬೊಮ್ಮಾಯಿ ಚಲನಚಿತ್ರೋತ್ಸವದ ಲೋಗೋವನ್ನು ಬಿಡುಗಡೆ ಮಾಡಿದರು.


ಬೆಂಗಳೂರು ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಫಿಲಂ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ಮಾನ್ಯತೆ ನೀಡಿದೆ. ಈ ಮೂಲಕ ಚಿತ್ರೋತ್ಸವಕ್ಕೆ ಜಾಗತಿಕ ಮನ್ನಣೆ ದೊರೆತಿದೆ. ವಿಶ್ವದ 45 ಜಾಗತಿಕ ಮಟ್ಟದ ಚಲನಚಿತ್ರೋತ್ಸವಗಳ ಪೈಕಿ ಬೆಂಗಳೂರು ಸೇರಿರುವುದು ಹೆಮ್ಮೆಯ ಸಂಗತಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಸಭೆ ಬಳಿಕ ಮಾತನಾಡಿದ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಸಿಎಂ ಅವರ ಜೊತೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸದ ಬಗ್ಗೆ ಚರ್ಚೆ ನಡೆಸಲಾಯಿತು. ಈ ಚಲನಚಿತ್ರೋತ್ಸವ ದೇಶದ ಐದನೇ ದೊಡ್ಡ ಚಲನಚಿತ್ರೋತ್ಸವವಾಗಿದೆ. ಈ ಬಾರಿ ಚಲನಚಿತ್ರೋತ್ಸವ ನಡೆಸಲು ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ.

ಕೊರೊನಾ ನಿಯಮಾವಳಿ ಪಾಲಿಸಿಕೊಂಡು ಚಲನಚಿತ್ರೋತ್ಸವ ನಡೆಯಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತೋಟಗಾರಿಕಾ ಸಚಿವ ಮುನಿರತ್ನ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಂ, ಸಂಘಟನಾ ಸಮಿತಿ ಸದಸ್ಯರಾದ ಖ್ಯಾತ ಕಲಾವಿದೆ ಸುಧಾರಾಣಿ, ಕಲಾ ನಿರ್ದೇಶಕ ಶಶಿಧರ್ ಅಡಪ, ಕಲಾವಿದೆ ಸೋನುಗೌಡ, ಕಲಾ ನಿರ್ದೇಶಕ ಹೆಚ್.ಎನ್.ನರಹರಿರಾವ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಆಯುಕ್ತ ಪಿ.ಎಸ್.ಹರ್ಷಾ ಉಪಸ್ಥಿತರಿದ್ದರು.

Exit mobile version