ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿತ,ಇನ್ನೂ 194 ಕಟ್ಟಗಳು ಕುಸಿಯುವ ಭೀತಿಯಲ್ಲಿವೆ !

ಬೆಂಗಳೂರು ಸೆ 28: ನಿನ್ನೆ ಸಿಲಿಕಾನ್‌ ಸಿಟಿಯಲ್ಲಿ ಒಂದು ಕಟ್ಟಡ ಕುಸಿದ ಬೆನ್ನಲೇ ಇಂದು ಕೂಡ ಡೈರಿ ಸರ್ಕಲ್ ಬಳಿ ಮೂರು  ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು, 5 ಜನಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ. 16 ಮನೆಗಳು ಇರುವ ಮೂರು ಅಂತಸ್ತಿನ ಕಟ್ಟಡ ಇದಾಗಿದ್ದು,ಬೆಳಗ್ಗೆ 9.30ರ ಸುಮಾರಿಗೆ ಈ  ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ಡೈರಿ ಸರ್ಕಲ್ ಬಳಿ ಸಂಭವಿಸಿದ್ದು ಇದು ಕೆಎಂಎಫ್‌ ಕಚೇರಿ ಬಳಿಯ ಕ್ವಾಟರ್ಸ್ ಕಟ್ಟಡ ಇದಾಗಿದೆ. ಘಟನೆಯಲ್ಲಿ 5 ಮಂದಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. 50 ವರ್ಷದಷ್ಟು ಹಳೆಯ ಕಟ್ಟಡ ಇದಾಗಿದ್ದು ಭೀಕರ ಕುಸಿತ ಕಂಡ ಜನ ಬೆಚ್ಚಿಬಿದ್ದಿದ್ದಾರೆ. ಘಟನೆ ವೇಳೆ ಒಂದು ಕುಟುಂಬದವರು ಕಟ್ಟಡದಲ್ಲಿದ್ದರು. ಕುಸಿಯುವ ಲಕ್ಷಣ ಕಂಡು ಬರುತ್ತಿದ್ದಂತೆ ಅಕ್ಕಪಕ್ಕದವರು ಕೂಗಾಡಿದ್ದಾರೆ. ಆಗ ತಕ್ಷಣ ಕಟ್ಟಡದಲ್ಲಿದ್ದವರು ಹೊರಬಂದಿದ್ದಾರೆ. ಈ ಮೂಲಕ ದುರಂತವೊಂದು ತಪ್ಪಿದಂತಾಗಿದೆ.

ಬೆಂಗಳೂರಿನಲ್ಲಿ ದಿನಕ್ಕೊಂದು ಕಟ್ಟಡಗಳ ನಿರ್ಮಾಣ ಆರಂಭವಾದರೆ , ಕೆಲವೊಂದು ಮುಕ್ತಾಯವಾಗುತ್ತದೆ. ಆದರೆ ಆಘಾತಕಾರಿ ಅಂಶವೆಂದರೆ  ಬೆಂಗಳೂರಿನಲ್ಲಿ 194 ಕಟ್ಟಡಗಳು ಬೀಳುವ ಹಂತದಲ್ಲಿವೆ ಎಂಬ ವಿಚಾರ ಬಹಿರಂಗವಾಗಿದೆ.  ಎರಡು ವರ್ಷದ ಹಿಂದೆಯೇ ಸರ್ವೆ ಮಾಡಿ, ಈ ಕಟ್ಟಡಗಳ ಕುರಿತು ಅಧಿಕಾರಿಗಳು  ರಿಪೋರ್ಟ್​ ನೀಡಿದ್ದಾರೆ. ಆದರೆ  ಕೊರೊನಾ ಕಾರಣದಿಂದ ಕ್ರಮಕೈಗೊಳ್ಳದೇ  ಪಾಲಿಕೆ ಸುಮ್ಮನೆ ಕುಳಿತಿದ್ದು, ಜನರ ಜೀವಗಳ ಜೊತೆ ಚೆಲ್ಲಾಟವಾಡುತ್ತಿದೆ. ಹೌದು, ಈ ಬಗ್ಗೆ ರಿಪೋರ್ಟ್ ಬಂದಾಗ ಪಾಲಿಕೆ  ಹಲವಾರು ಮಂದಿ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಿದೆ. ಆದರೂ ಕೂಡ ಯಾವುದೇ ಕಟ್ಟಡ  ಮಾಲೀಕರು, ಅದನ್ನು ತೆರವು ಮಾಡಿಲ್ಲ. ಇದು ಗೊತ್ತಿದ್ದರೂ ಸಹ ಪಾಲಿಕೆ ಸುಮ್ಮನಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಯಲಹಂಕ ವಲಯದಲ್ಲಿ 67 ಕಟ್ಟಡಗಳು  ಶಿಥಿಲಾವಸ್ಥೆಯಲ್ಲಿದೆ,   ಪೂರ್ವ ವಲಯದಲ್ಲಿ 53 ಕಟ್ಟಡಗಳು ಅಪಾಯದಲ್ಲಿದೆ. ಪಶ್ಚಿಮ ವಲಯದಲ್ಲಿ  53  ಕಟ್ಟಡಗಳು ಬೀಳುವ ಸ್ಥಿತಿಯಲ್ಲಿದೆ.  ದಕ್ಷಿಣ ವಲಯದಲ್ಲಿ 38 ಕಟ್ಟಡಗಳು ಹಾಗೂ ಮಹಾದೇವಪುರ ವಲಯದಲ್ಲಿ  03 ಕಟ್ಟಡಗಳು ಇದ್ದು ಈ ಕಟ್ಟಡಗಳು ಯಾವಗ ಕುಸಿಯಲಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ.

Exit mobile version