`ಹಾಸ್ಯ ಕಲಾವಿದ’ನೊಬ್ಬ ಮುಖ್ಯಮಂತ್ರಿಯಾದ ರೋಚಕ ಕಥೆ!

aap

ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಪಂಜಾಬ್‍ನಲ್ಲಿ ಉದಯಿಸಿರುವ ಹೊಸ ನಾಯಕನ ಹೆಸರು ಭಗವಂತ್ ಮಾನ್. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಗವಂತ ಮಾನ್ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ರಾಜಕೀಯ ಪ್ರವೇಶಿಸಿ, ಅನೇಕ ಏಳುಬೀಳುಗಳನ್ನು ಕಂಡ ಭಗವಂತ್ ಮಾನ್ ಎಂಬ ಸಾಮಾನ್ಯ ವ್ಯಕ್ತಿ, ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಗದಿಗೇರಲು ಆಯ್ಕೆಯಾಗಿದ್ದು, ನಿಜಕ್ಕೂ ಅನೇಕರಿಗೆ ಅಚ್ಚರಿ ಮೂಡಿಸಿದೆ. ಸಾಕಷ್ಟು ಅಪಮಾನ, ರಾಜಕೀಯ ಸೋಲುಗಳು, ಪಕ್ಷಾಂತರ ಹೀಗೆ ಎಲ್ಲವನ್ನೂ ಮೆಟ್ಟಿನಿಂತು, ಕೇವಲ ಒಂದು ದಶಕದ ಅವಧಿಯೊಳಗೆ ಮುಖ್ಯಮಂತ್ರಿಯಾಗುವುದು ಸಾಮಾನ್ಯ ಸಂಗತಿಯಲ್ಲ.

ಇನ್ನು 2011ರಲ್ಲಿ ಶಿರೋಮಣಿ ಅಕಾಲಿದಳದ ವಿರುದ್ದ, ಮನ್‍ಪ್ರೀತ್ ಸಿಂಗ್ ಬಾದಲ್ ಸ್ಥಾಪಿಸಿದ್ದ, ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್ ಮೂಲಕ ಭಗವಂತ್ ಮಾನ್ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. 2012ರಲ್ಲಿ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ದ ಸೋಲು ಕಂಡರು. ಮುಂದೆ ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್ ಪಕ್ಷ ಕಾಂಗ್ರೆಸ್‍ನೊಂದಿಗೆ ವಿಲೀನವಾದಾಗ ಪಕ್ಷವನ್ನು ತೊರೆದು, ಆಮ್ ಆದ್ಮಿ ಪಕ್ಷವನ್ನು ಸೇರಿಕೊಂಡರು. ಎಎಪಿ ಅಭ್ಯರ್ಥಿಯಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಸಂಗ್ರೂರ್ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ದಾಖಲಿಸಿದರು.

ಇನ್ನು ಕೇಜ್ರಿವಾಲ್ ಸೂಚನೆಯ ಮೆರೆಗೆ 2017ರ ಪಂಜಾಬ್ ವಿಧಾನಸಭೆ ಚುನಾವಣೆಗೆ ಮತ್ತೇ ಸ್ಪರ್ಧಿಸಿದ ಮಾನ್, ಮತ್ತೇ ಸೋಲುಂಡರು. ಆದರೆ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದಲೇ ಮತ್ತೇ ಗೆದ್ದು ಸಂಸದರಾದರು. ಹೀಗೆ ಭಗವಂತ್ ಮಾನ್ ಅವರ ರಾಜಕೀಯ ಜೀವನವೂ ಅನೇಕ ಏಳುಬೀಳುಗಳನ್ನು ಕಂಡಿದೆ. ಇನ್ನು ಈ ಬಾರಿಯ ಚುನಾವಣೆಯಲ್ಲಿ ಭಗವಂತ್ ಮಾನ್ ಸಂಗ್ರೂರ್ ಜಿಲ್ಲೆಯ ಧುರಿ ವಿಧಾನಸಭಾ ಕ್ಷೇತ್ರದಿಂದ 58,000ಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಇನ್ನು ಭಗವಂತ್ ಮಾನ್ ಮೂಲತಃ ಒರ್ವ ಹಾಸ್ಯ ಕಲಾವಿದ. ಪಂಜಾಬ್‍ನಲ್ಲಿ ಅನೇಕ ಕಿರುತೆರೆಯ ಹಾಸ್ಯ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಎರಡು ಸಿನಿಮಾಗಳಲ್ಲೂ ನಟಿಸಿರುವ ಮಾನ್, ಪಂಜಾಬ್‍ನಲ್ಲಿ ಜನಪ್ರಿಯ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಸಾಮಾನ್ಯ ಕೌಟುಂಬಿಕ ಹಿನ್ನಲೆ ಹೊಂದಿರುವ ಮಾನ್, ವಾಣಿಜ್ಯ ಪದವಿಗೆ ಪ್ರವೇಶ ಪಡೆದರೂ, ಪದವಿಯನ್ನು ಪೂರೈಸಿಲ್ಲ, ಹಾಸ್ಯ ಕಲಾವಿದನಾಗಿಯೇ ಬದುಕು ಕಟ್ಟಿಕೊಂಡಿದ್ದಾರೆ.

ಸಂಸದನಾಗಿದ್ದಾಗ ತಮ್ಮ ಕುಡಿತದ ಚಟದಿಂದ ಭಗವಂತ್ ಮಾನ್ ಹೆಚ್ಚು ಸುದ್ದಿಯಾಗಿದ್ದರು. ಸಂಸತ್ತಿಗೆ ಕುಡಿದು ಬರುತ್ತಾರೆ ಎಂಬ ಆಪಾದನೆಯೂ ಮಾನ್ ಮೇಲಿತ್ತು. ಅದು ಸತ್ಯವೂ ಹೌದು. ಅದನ್ನು ಭಗವಂತ್ ಮಾನ್ ಒಪ್ಪಿಕೊಂಡಿದ್ದರು. ಭಗವಂತ್ ಮಾನ್ ಅವರ ಕುಡಿತವನ್ನೇ ಇಟ್ಟುಕೊಂಡು ಈ ಬಾರಿಯ ಚುನಾವಣೆಯಲ್ಲಿ ವಿರೋಧ ಪಕ್ಷಗಳನ್ನು ಅವರನ್ನು ಟೀಕಿಸಿದವು.

“ಮಾನ್ ಮುಖ್ಯಮಂತ್ರಿಯಾದ್ರೆ, ಸಂಜೆ ಮೇಲೆ ಯಾರಿಗೂ ಸಿಗುವುದಿಲ್ಲ” ಎಂದು ಲೇವಡಿ ಮಾಡಿದವು. ಆದರೆ “ನಾನಿನ್ನೂ ಯಾವತ್ತೂ ಕುಡಿಯುವುದಿಲ್ಲ ಎಂದು ಭಗವಂತ್ ಮಾನ್ ಬಹಿರಂಗ ವೇದಿಕೆಯಲ್ಲಿ ತಮ್ಮ ತಾಯಿ ಮತ್ತು ಅರವಿಂದ್ ಕೇಜ್ರಿವಾಲ್ ಮುಂದೆ ಪ್ರಮಾಣ ಮಾಡಿದರು. ಈ ಅಂಶವೂ ಮತದಾರರನ್ನು ಭಾವನಾತ್ಮಕವಾಗಿ ಕಟ್ಟಿಹಾಕಿತು. ಹೀಗೆ ಎಲ್ಲ ಅವಮಾನ, ಸೋಲು, ಹಿನ್ನಡೆಗಳನ್ನು ಮೆಟ್ಟಿನಿಂತು ಭಗವಂತ್ ಮಾನ್ ಪಂಜಾಬ್ ಮತದಾರರ ಮನಗೆದ್ದಿದ್ದಾರೆ. ಅವರಿಗೆ ಶುಭವಾಗಲಿ.

Exit mobile version