ಭಾರತ ಬಂದ್‌ಗೆ ದೇಶಾದ್ಯಂತ ವ್ಯಾಪಕ ಬೆಂಬಲ

ನವದೆಹಲಿ, ಡಿ. 7: ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನು ವಿರೋಧಿಸಿ ಕಳೆದ 11 ದಿನಗಳಿಂದ ಪ್ರತಿಭಟನೆಯಲ್ಲಿ ನಿರತರಾಗಿದ್ದು, ರೈತರು ನಾಳೆ ಕರೆ ನೀಡಿರುವ ಭಾರತ್ ಬಂದ್‍ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ದೇಶದ ವಿವಿಧ ರಾಜಕೀಯ ಪಕ್ಷಗಳು ರೈತರ ಬೆಂಬಲಕ್ಕೆ ನಿಂತಿದ್ದು , ಕೇಂದ್ರ ಸರ್ಕಾರ ಕೂಡಲೇ ರೈತ ವಿರೋಧಿ ಕೃಷಿ ಮಸೂದೆಯನ್ನು ಕೈ ಬಿಡುವಂತೆ ಒತ್ತಾಯಿಸಿವೆ.

ನಿನ್ನೆ 14ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಭಾರತ್ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ ಬೆನ್ನಲ್ಲೇ ಇಂದು ಸಮಾಜವಾದಿ ಪಕ್ಷ , ಎನ್‍ಸಿಪಿ ಹಾಗೂ ಬಿಎಸ್‍ಪಿ ಪಕ್ಷಗಳು ರೈತರ ಬೆಂಬಲಕ್ಕೆ ನಿಂತಿವೆ. ತಮ್ಮ ನ್ಯಾಯ ಸಮ್ಮತ ಬೇಡಿಕೆ ಈಡೇರಿಕೆಗಾಗಿ ರೈತರು ಕರೆ ನೀಡಿರುವ ಭಾರತ್ ಬಂದ್‍ಗೆ ನಮ್ಮ ಬೆಂಬಲವಿದೆ. ಕೂಡಲೇ ಕೇಂದ್ರ ಸರ್ಕಾರ ಕೃಷಿ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಹರಿಸಬೇಕು ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಇಂದು ಟ್ವೀಟ್ ಮಾಡಿದ್ದಾರೆ.

ರೈತರು ಕರೆ ನೀಡಿರುವ ಭಾರತ್ ಬಂದ್‍ನಲ್ಲಿ ಬಿಎಸ್ಪಿ ಪಕ್ಷದ ಕಾರ್ಯಕರ್ತರು ಕೈ ಜೋಡಿಸುವಂತೆ ಮಾಯಾವತಿ ಅವರು ಮನವಿ ಮಾಡಿದ್ದಾರೆ. ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಭಾರತ್ ಬಂದ್‍ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದು , ಸಂಕಷ್ಟದಲ್ಲಿರುವ ಕೃಷಿ ಸಮಾಜ ಬೆಂಬಲಕ್ಕೆ ತಮ್ಮ ಪಕ್ಷ ನಿಲ್ಲಲಿದೆ ಎಂದು ಘೋಷಿಸಿದ್ದಾರೆ.

ರೈತರು ಸೇರಿರುವ ದೆಹಲಿಯ ಸಿಂಘು ಗಡಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾರತ್ ಬಂದ್‍ಗೆ ಬೆಂಬಲ ಘೋಷಿಸಿದ್ದಾರೆ. ನಿನ್ನೆಯಷ್ಟೇ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ಕೇಜ್ರಿವಾಲ್ ಅವರು ಇಂದು ಮುಂಜಾನೆ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಸಿಂಘು ಗಡಿಗೆ ಆಗಮಿಸಿ ಹೋರಾಟ ನಿರತ ರೈತರಿಗೆ ನೀಡಿರುವ ಸೌಕರ್ಯಗಳ ಪರಿಶೀಲನೆ ನಡೆಸಿದರು.

ನಾನು ಇಲ್ಲಿಗೆ ಮುಖ್ಯಮಂತ್ರಿಯಾಗಿ ಬಂದಿಲ್ಲ. ನಿಮ್ಮ ಸೇವಾಧಾರನಾಗಿ ಇಲ್ಲಿಗೆ ಆಗಮಿಸಿದ್ದೇನೆ. ನಿಮ್ಮ ಹೋರಾಟಕ್ಕೆ ಸದಾ ನಮ್ಮ ಪಕ್ಷದ ಬೆಂಬಲವಿರಲಿದೆ ಎಂದು ರೈತ ಸಮುದಾಯಕ್ಕೆ ಕೇಜ್ರಿವಾಲ್ ಅಭಯ ನೀಡಿದ್ದಾರೆ. ರೈತರ ಪ್ರತಿಭಟನೆಗೆ ದೆಹಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹರಿಯಾಣ ಹಾಗೂ ಉತ್ತರಪ್ರದೇಶ ಗಡಿಯಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆಯನ್ನು ಮಾಡಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.

Exit mobile version