ಭಾರತೀಯ ನೌಕಾಪಡೆಗೆ ಸ್ಮ್ಯಾಶ್- 2000 ರೈಫಲ್

ನವದೆಹಲಿ, ಡಿ. 04: ಶತ್ರುರಾಷ್ಟ್ರಗಳ ಡ್ರೋನ್‌ ದಾಳಿ ಹಿಮ್ಮೆಟ್ಟಿಸಲು ಭಾರತೀಯ ನೌಕಾಪಡೆ ಸ್ಮ್ಯಾಶ್‌- 2000 ರೈಫ‌ಲ್‌ಗ‌ಳನ್ನು ಭದ್ರತೆಗೆ ನಿಯೋಜಿಸಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಕರಮ್‌ಬೀರ್‌ ಸಿಂಗ್‌ ತಿಳಿಸಿದ್ದಾರೆ.

“ನೌಕಾದಿನ’ ಪ್ರಯುಕ್ತ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು, “ಎದುರಾಳಿಗಳ ಡ್ರೋನ್‌ಗಳನ್ನು ಹೊಡೆದುರುಳಿಸಲು ಸ್ಮ್ಯಾಶ್‌-2000 ರೈಫ‌ಲ್‌ಗ‌ಳು ಅತ್ಯಂತ ಸಮರ್ಥ. ಸೇನೆಯ 3 ಸೇವೆಗಳಿಗೂ ಇವು ಬಳಕೆಯಾಗಲಿವೆ’ ಎಂದು ತಿಳಿಸಿದ್ದಾರೆ.

ಕಾರ್ಯತಂತ್ರ: “ನೌಕಾಪಡೆ ಎಲ್ಲ ಯೋಜನೆಗಳನ್ನೂ ಭೂಸೇನೆ, ವಾಯುಸೇನೆ ಜತೆಗೂಡಿಯೇ ನಡೆಸುತ್ತದೆ. ನೌಕಾಪಡೆಯ ಕಣ್ಗಾವಲು ಯುದ್ಧವಿಮಾನ ಪಿ-81 ಮತ್ತು ಹೆರಾನ್‌ ಡ್ರೋನ್‌ಗಳನ್ನು ಎಲ್‌ಎಸಿಯಲ್ಲೂ ನಿಯೋಜಿಸಲಾಗಿದೆ. ವಾಯುನೆಲೆಗಳ ರಕ್ಷಣೆಗೂ ಇವುಗಳನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದು ಸೇನೆಯ ಜಂಟಿ ಕಾರ್ಯಂತ್ರದ ಕುರಿತು ವಿವರಿಸಿದರು.

“ಪ್ರಸ್ತುತ 3 ಚೀನೀ ಯುದ್ಧನೌಕೆಗಳು ಹಿಂದೂ ಮಹಾಸಾಗರ ಗಡಿ ಸಮೀಪ ಗಸ್ತು ತಿರುಗುತ್ತಿವೆ. ಇವುಗಳ ಮೇಲೂ ಪಿ-81 ಯುದ್ಧವಿಮಾನಗಳು ಹದ್ದಿನ ಗಣ್ಣು ನೆಟ್ಟಿವೆ. ಸಾಗರ ಭದ್ರತೆ ಹೆಚ್ಚಿಸಲು 6 ಜಲಾಂತರ್ಗಾಮಿ ನೌಕೆಗಳನ್ನು ನಿಯೋಜಿಸಲು ನೌಕೆ ಮುಂದಾಗಿದೆ’ ಎಂದು ತಿಳಿಸಿದ್ದಾರೆ.

 “ಭಾರತ ಈಗಾಗಲೇ ಎರಡು (ಐಎನ್‌ಎಸ್‌ ವಿಕ್ರಮಾದಿತ್ಯ ಮತ್ತು ಐಎನ್‌ಎಸ್‌ ವಿಕ್ರಾಂತ್‌) ಯುದ್ಧವಾಹಕ ನೌಕೆ ಹೊಂದಿದೆ. ಕಡಲ ಗಡಿ ಭದ್ರತೆಗೆ 3ನೇ ಯುದ್ಧವಾಹಕ ನೌಕೆಯ ಅವಶ್ಯಕತೆ ತುಂಬಾ ಇದೆ’ ಎಂದೂ ಅಭಿಪ್ರಾಯಪಟ್ಟರು.

ಭಾರತ ಯಾರಿಗೂ ಸುಖಾಸುಮ್ಮನೆ ಬೆದರಿಕೆಯೊಡ್ಡುವುದಿಲ್ಲ. ಹಾಗೆಯೇ ಯಾರಿಂದಲೂ ಬೆದರಿಕೆಗಳನ್ನು ಸಹಿಸಿಕೊಳ್ಳುವುದೂ ಇಲ್ಲ.

Exit mobile version