ಬಿಟ್‌ ಕಾಯಿನ್ ಬಗ್ಗೆ ಇಟಲಿಯಲ್ಲಿ ತನಿಖೆ ಮಾಡಲಿ – ಸಿ.ಟಿ. ರವಿ

ಬೆಂಗಳೂರು ನ.9: ಬಿಟ್‌ ಕಾಯಿನ್‌ ಹಗರಣದಲ್ಲಿ ರಾಜ್ಯದ ಇಬ್ಬರು ಪ್ರಭಾವಿಗಳು ಇದ್ದಾರೆ ಎಂಬ ಆರೋಪವನ್ನು ವಿರೋಧ ಪಕ್ಷಗಳು ಮಾಡಿವೆ. ಆದರೆ ಯಾರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುವುದು ಮಾತ್ರ ನಿಗೂಢವಾಗಿ ಉಳಿದಿದೆ. ಈಗಾಗಲೇ ಪ್ರಕರಣದ ತನಿಖೆಯನ್ನು ಸಿಬಿಐ ಹಾಗೂ ಇಡಿಗೆ ನೀಡುವಂತೆ ಕೋರಿ ರಾಜ್ಯ ಸರ್ಕಾರ ಪತ್ರವನ್ನು ಬರೆದಿದೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಪ್ರಧಾನಿ ಕಾರ್ಯಾಲಯಕ್ಕೂ ಹಗರಣದ ಕುರಿತಾಗಿ ಮಾಹಿತಿಯನ್ನು ನೀಡುತ್ತಿವೆ ಎನ್ನಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಬಿಟ್‌ಕಾಯಿನ್ ವಿಚಾರವಾಗಿ ಸರ್ಕಾರ ತನಿಖೆ ನಡೆಸುತ್ತಿದೆ. ಆದರೆ, ಕಾಂಗ್ರೆಸ್‌ಗೆ ತೃಪ್ತಿ ಇದ್ದಂತೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಕೇವಲ ಗಾಳಿಯಲ್ಲಿ ಗುಂಡು ಹೊಡೆಯುತ್ತಿದೆ. ಬಿಟ್‌ಕಾಯಿನ್ ವಿಚಾರವಾಗಿ ಸರ್ಕಾರ ಈಗಾಗಲೇ ತನಿಖೆ ನಡೆಸುತ್ತಿದೆ. ಆದರೆ, ಕಾಂಗ್ರೆಸ್ ನಾಯಕರ ಮಾತುಗಳನ್ನು ಗಮನಿಸಿದರೆ ಅವರಿಗೆ ಸರ್ಕಾರಿ ಸಂಸ್ಥೆಗಳ ತನಿಖೆಯ ಮೇಲೆ ತೃಪ್ತಿ ಇದ್ದಂತೆ ಕಾಣುತ್ತಿಲ್ಲ. ಅವರಿಗೆ ಇಟಲಿಯ ಮೇಲೆ ನಂಬಿಕೆ ಇದ್ದರೆ ಇಟಲಿಗೇ ಹೋಗಿ ತನಿಖೆಗೆ ಕೊಡಲಿ ಎಂದು ವ್ಯಂಗ್ಯವಾಡಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಯಾರ ಮೇಲೆ ನಂಬಿಕೆ ಇದೆ? ನ್ಯಾಯಾಂಗದ ಮೇಲೆ ವಿಶ್ವಾಸವಿದ್ದರೆ ಆಧಾರಗಳನ್ನು ನೀಡಲಿ, ಸಿಬಿಐ ಬಗ್ಗೆ ನಂಬಿಕೆ ಇದ್ದರೆ ಆಧಾರ ಕೊಡಲಿ. ಅಥವಾ ಪೊಲೀಸರ ಕುರಿತು ವಿಶ್ವಾಸವಿದ್ದಲ್ಲಿ ಅವರಿಗೆ ಬಿಟ್‌ಕಾಯಿನ್ ಹಗರಣ ಕುರಿತು ಸಾಕ್ಷ್ಯಾಧಾರಗಳನ್ನು ಕೊಡಲಿ ಎಂದು ಸವಾಲು ಹಾಕಿದರು.

ರಾಜ್ಯವನ್ನೇ ಬೆಚ್ಚಿ ಬೀಳಿಸುತ್ತಿರುವ ಬಿಟ್‌ ಕಾಯಿನ್ ಹಗರಣದ ತನಿಖೆಯಲ್ಲಿ ಇದೀಗ ಪ್ರಧಾನಿ ಕಾರ್ಯಾಲಯವೂ ನಿಗಾ ಇಟ್ಟಿದೆ ಎಂಬ ಮಾಹಿತಿ ತಿಳಿದುಬರುತ್ತಿದೆ. ಬಿಟ್‌ ಕಾಯಿನ್ ಹಗರಣದಲ್ಲಿ ಹಲವು ಆಯಾಮಗಳು ಬಹಿರಂಗಗೊಳ್ಳುತ್ತಿದ್ದು ಪ್ರಭಾವಿ ರಾಜಕಾರಣಿಗಳು ಇದ್ದಾರೆ ಎಂಬ ವದಂತಿಯೂ ಹರಿದಾಡುತ್ತಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಘ ಸಂಸ್ಥೆಗಳು ಪ್ರಧಾನಿ ಕಾರ್ಯಾಲಯಕ್ಕೂ ಪತ್ರವನ್ನು ಬರೆದಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುಂತೆ ಕೋರಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಕಾರ್ಯಾಲಯವೂ ಪ್ರಕರಣದ ಮೇಲೆ ನಿಗಾ ಇಟ್ಟಿದೆ ಎಂದು ತಿಳಿದುಬಂದಿದೆ.

Exit mobile version