ಮಂತ್ರಿಸ್ಥಾನಕ್ಕಾಗಿ ಲಾಭಿ ನಡೆಸುತ್ತಿರುವ ಬಿಜೆಪಿ ನಾಯಕರಿಗೆ ಜನರ ಜೀವಕ್ಕಿಂತ ಮಂತ್ರಿ ಆಗುವುದು ಮುಖ್ಯ: ಸಿದ್ದರಾಮಯ್ಯ ಟೀಕೆ

ಕಾರವಾರ, ಅ. 02: ರಾಜ್ಯದ ಬಿಜೆಪಿ ಶಾಸಕರು ಮಂತ್ರಿ ಪದವಿಗಾಗಿ ಲಾಬಿ ಮಾಡುತ್ತಿದ್ದು, ಇವರಿಗೆ ಜನರ ಜೀವಕ್ಕಿಂತ ಮಂತ್ರಿ ಆಗುವುದು ಮುಖ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ
ಸಿದ್ದರಾಮಯ್ಯ ಕಿಡಿಕಾರಿದರು.

ಕಾರವಾರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿರ್ವಹಣೆ ಬಿಟ್ಟು ಮುಖ್ಯಮಂತ್ರಿಗಳು ಅವರು ಮಂತ್ರಿಮಂಡಲ ರಚನೆಗೆ ಓಡಾಡುತ್ತಿದ್ದಾರೆ. ಒಮ್ಮೆ ದೆಹಲಿಗೆ ಹೋಗುವುದಕ್ಕೆ ನಮ್ಮ ತಕರಾರಿಲ್ಲ, ಆದರೆ ಪದೇ ಪದೇ ಹೋಗುವ ಅಗತ್ಯವೇನಿದೆ? ಇಂಥಾ ಸಮಯದಲ್ಲಿ ಬಿಜೆಪಿ ಹೈಕಮಾಂಡ್ ಕೂಡ ರಾಜ್ಯದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕಲ್ಲವೇ? ಎಂದು ಪ್ರಶ್ನಿಸಿದ ಅವರು, ಬಸವರಾಜ ಬೊಮ್ಮಾಯಿ ಅವರು ಈಗಷ್ಟೇ ಮುಖ್ಯಮಂತ್ರಿ ಆಗಿದ್ದು, ಅವರ ಬಗ್ಗೆ ಟೀಕೆ ಮಾಡುವುದಿಲ್ಲ.‌ ಆದರೆ ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಕೊಡಬೇಕು ಎಂದು ಒತ್ತಾಯಿಸುತ್ತೇನೆ.

ಇದೇ ವೇಳೆ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯ ಆತಂಕ ಎದುರಾಗಿರುವ ಕುರಿತು ಮಾತನಾಡಿದ ಅವರು, ಕೊರೊನಾ ಮೂರನೆ ಅಲೆ ನಮ್ಮ ರಾಜ್ಯಕ್ಕೆ ಬರದಂತೆ ತಡೆಯುವುದು ರಾಜ್ಯ ಬಿಜೆಪಿ ಸರ್ಕಾರದ ಪ್ರಾಥಮಿಕ ಕೆಲಸವಾಗಬೇಕು. ಅಲ್ಲದೇ ಮಹಾರಾಷ್ಟ್ರ ಹಾಗೂ ಕೇರಳ ಗಡಿಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸಿ, ಕೊವಿಡ್ ನೆಗೆಟಿವ್ ವರದಿ ಬಂದವರನ್ನು ಹಾಗೂ ಎರಡೂ ಡೋಸ್ ಲಸಿಕೆ ಪಡೆದವರನ್ನು ಮಾತ್ರ ಗಡಿ ಒಳಗೆ ಬಿಡಬೇಕಿದೆ ಎಂದರು.

ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮಕೈಗೊಳ್ಳುವ ಮೂಲಕ
ಲಾಕ್ ಡೌನ್ ಹೇರುವಂತ ಪರಿಸ್ಥಿತಿ ನಿರ್ಮಾಣವಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಕಳೆದೆರಡು ದಿನಗಳಿಂದ ಸೋಂಕಿನ ಪ್ರಮಾಣ ಎರಡು ಸಾವಿರ ಸಮೀಪದಲ್ಲಿದೆ. ಇದು ಎರಡು ಸಾವಿರದ ಗಡಿ ದಾಟಿದರೆ ಮೂರನೆ ಅಲೆ ಶುರುವಾಗಿದೆ ಎಂದರ್ಥ ಎಂದು ಹೇಳಿದರು.

ಇನ್ನೂ ಬಿಜೆಪಿ ಭ್ರಷ್ಟರ ಪಕ್ಷ, ಅವರ ಸರ್ಕಾರ ಭ್ರಷ್ಟ ಸರ್ಕಾರ. ಯಡಿಯೂರಪ್ಪ ಭ್ರಷ್ಟರಲ್ಲದೆ ಹೋಗಿದ್ದರೆ ಮುಖ್ಯಮಂತ್ರಿ ಹುದ್ದೆಯಿಂದ ಏಕೆ ಕೆಳಗಿಳಿಸುತ್ತಿದ್ದರು? ವಯಸ್ಸಾಗಿದ್ದು ಒಂದೇ ಕಾರಣವಾಗಿದ್ದರೆ ಎಪ್ಪತ್ತೈದು ದಾಟಿ ಎರಡು ವರ್ಷ ಕಳೆದಿಲ್ಲವೆ? ಇಷ್ಟು ಕಾಲ ಏಕೆ ಸುಮ್ಮನಿದ್ದರು? ಬಿಜೆಪಿ ಅವರು ತಾವು ಮಹಾನ್ ಸುಸಂಸ್ಕೃತರು ಎಂದು ಹೇಳಿಕೊಳ್ಳುತ್ತಾರೆ. ನಮ್ಮಂತ ಸಂಸ್ಕಾರ, ನಡತೆ ಯಾರಿಗೂ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ವಾಸ್ತವದಲ್ಲಿ ಇವರಷ್ಟು ಭಂಡರು ಯಾರೂ ಇಲ್ಲ ಎಂದು ಟೀಕಿಸಿದರು.

Exit mobile version