ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಅಸಮರ್ಥ: ಸಿದ್ದರಾಮಯ್ಯ ಟೀಕೆ

ಬೆಂಗಳೂರು, ಏ. 08: ತಮ್ಮದೇ ಪಕ್ಷದ ಮುಖ್ಯಮಂತ್ರಿ ವಿರುದ್ಧ ಸಮರ ಸಾರಿರುವ ಹಾಗೂ ಬಹಿರಂಗ ಹೇಳಿಕೆ ನೀಡುತ್ತಿರುವ ಬಿಜೆಪಿ ಶಾಸಕ ಮತ್ತು ಸಚಿವನ ವಿರುದ್ಧ ಕ್ರಮಕೈಗೊಳ್ಳಲಾಗದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಒಬ್ಬ ಅಸಮರ್ಥ ನಾಯಕ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಮ್ಮದೇ ಪಕ್ಷದ ‌ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ದ ದಿನನಿತ್ಯ ಹೇಳಿಕೆ ನೀಡುವ ಮೂಲಕ ಬಹಿರಂಗ ಸಮರ ಸಾರಿದ್ದಾರೆ. ಆದರೂ ಈ ಇಬ್ಬರ ವಿರುದ್ದ ಕ್ರಮಕೈಗೊಳ್ಳಲಾಗದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಒಬ್ಬ ಅಸಮರ್ಥ ನಾಯಕ. ಇವರಿಗೆ ವಿರೋಧ ಪಕ್ಷದ ನಾಯಕರ ಬಗ್ಗೆ‌ ಮಾತನಾಡುವ ಯಾವ ಯೋಗ್ಯತೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಚಿವ ಈಶ್ವರಪ್ಪ ಅವರ ಜೊತೆಯಲ್ಲಿ ಬಿ.ಎಲ್. ಸಂತೋಷ್ ಕೂಡಾ ಶಾಮೀಲಾಗಿದ್ದಾರೆ. ಇದೇ ಕಾರಣದಿಂದ ಈಶ್ವರಪ್ಪ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಯಾವುದೇ ಕ್ರಮಕೈಗೊಳದೆ ಹೈಕಮಾಂಡ್ ಮೂಕಪ್ರೇಕ್ಷಕನಾಗಿ ಕೂತಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

ಕಳೆದ ಕೆಲವು ದಿನಗಳ ಹಿಂದೆ ಅನುದಾನ ಬಿಡುಗಡೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿವ ಈಶ್ವರಪ್ಪ, ಈ ಕುರಿತು ರಾಜ್ಯಪಾಲರು ಹಾಗೂ ಬಿಜೆಪಿ ಹೈಕಮಾಂಡ್ಗೆ ಪತ್ರ ಬರೆದಿದ್ದರು. ಇನ್ನೂ ಮುಖ್ಯಮಂತ್ರಿ ಬದಲಾವಣೆ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹಲವು ಬಾರಿ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದು, ಈ ಇಬ್ಬರೂ ನಾಯಕರ ನಡೆ ರಾಜ್ಯ ಬಿಜೆಪಿಯಲ್ಲಿ ಸಂಚಲನ ಉಂಟುಮಾಡಿದೆ.

ಅಲ್ಲದೇ, ತಮ್ಮದೇ ಪಕ್ಷದ ಸಿಎಂ ವಿರುದ್ಧ ಇವರಿಬ್ಬರೂ ಬಹಿರಂಗ ಹೇಳಿಕೆ ನೀಡಿರುವುದು ಸದ್ಯ, ವಿರೋಧ ಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿ ಪರಿಣಮಿಸಿದೆ. ಅದರಲ್ಲೂ ಈ ಹೇಳಿಕೆಗಳನ್ನೇ ಮುಂದಿಟ್ಟುಕೊಂಡಿರುವ ಕಾಂಗ್ರೆಸ್, ರಾಜ್ಯ ಸರ್ಕಾರ ಹಾಗೂ ಬಿಜೆಪಿ ಹೈಕಮಾಂಡ್ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.

Exit mobile version