ಬಿಜೆಪಿಯದ್ದು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ವಿರೋಧಿ ಸರ್ಕಾರ: ಡಿ.ಕೆ ಶಿವಕುಮಾರ್

ಬೆಂಗಳೂರು, ಡಿ. 09: ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ರಾಜ್ಯ ಸರ್ಕಾರ ಫ್ಲೈಓವರ್ ಕಾಮಗಾರಿಗೆ ಬಳಸಿರುವುದು ಈ ವರ್ಗದ ಜನರ ಬಗ್ಗೆ ಬಿಜೆಪಿ ಸರ್ಕಾರಕ್ಕಿರುವ ಬದ್ಧತೆ ತೋರುತ್ತದೆ. ಇದು ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿರೋಧಿ ಸರ್ಕಾರವಾಗಿದ್ದು, ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕಿಸಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಭಾರತದ ಇತಿಹಾಸದಲ್ಲಿ ಬೆಳಗಾವಿ ಅಧಿವೇಶನದಲ್ಲಿ ನಮ್ಮ ಸರ್ಕಾರ ಸಂವಿಧಾನಾತ್ಮಕವಾಗಿ ಕಾನೂನು ಜಾರಿಗೆ ತಂದಿದ್ದೆವು. 30 ಸಾವಿರ ಕೋಟಿ ಹಣವನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಅಭಿವೃದ್ಧಿಗೆ ಮೀಸಲಿಟ್ಟು ಆ ಹಣವನ್ನು ಅವರಿಗಾಗಿಯೇ ಖರ್ಚು ಮಾಡಲು ನಾವು ಕಾನೂನು ರೂಪಿಸಿದ್ದೆವು. ಕಳೆದ ಬಜೆಟ್ ನಲ್ಲಿ ಇದು 17 ಸಾವಿರ ಕೋಟಿಗೆ ಇಳಿದಿತ್ತು. ಆರ್ಥಿಕ ಸಂಪನ್ಮೂಲ ಕೊರತೆ ಪರಿಸ್ಥಿತಿ ಅರಿತು ನಾವು ಈ ಬಗ್ಗೆ ಮಾತನಾಡಿರಲಿಲ್ಲ. ಈಗ 10 ಸಾವಿರ ಕೋಟಿಗೆ ಬಂದಿದ್ದು, ಜತೆಗೆ ಆ ಹಣವನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಿದೆ. ಇದು ಬಿಜೆಪಿಯು ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರ ವಿಚಾರವಗಿ ಬದ್ಧತೆ ಹೊಂದಿಲ್ಲ ಎಂಬುದಕ್ಕೆ ಸಾಕ್ಷಿ ಎಂದರು.

ಡಿಸಿಎಂ ಗೋವಿಂದ
ಕಾರಜೋಳ ಅವರು ಹಾಗೂ ಸಚಿವ ಶ್ರೀರಾಮುಲು ಅವರಿಗೆ ಸ್ವಾಭಿಮಾನ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು. ಕಾರಜೋಳ ಅವರು ಉಪಮುಖ್ಯಮಂತ್ರಿಯಾಗಿ ಅವರ ಧ್ವನಿ ಕಳೆದುಕೊಂಡಿದ್ದಾರೆ. ಬಿಜೆಪಿಯ ದಲಿತ ವಿರೋಧಿ ನೀತಿಯನ್ನು ಇವರಿಂದ ತಡೆಯಲು ಸಾಧ್ಯವಾಗಿಲ್ಲ. ಈ ಇಬ್ಬರ ಸಮ್ಮತಿ ಇಲ್ಲದೆ ಈ ಇಲಾಖೆ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಇದು ದಲಿತ ವಿರೋಧಿ ಸರ್ಕಾರವಾಗಿದ್ದು, ಇದು ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ.

ಹಸಿರು ಶಾಲಿಗೆ ಮಾಡಿದ ಅಪಮಾನ:
ಪಾಪ ಏನು ಮಾಡ್ತೀರಿ. ಈ ಹಸಿರು ಶಾಲು ಅವರನ್ನು ಜೆಡಿಎಸ್ ನಾಯಕರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿತ್ತು. ಕುಮಾರಸ್ವಾಮಿ ಅವರನ್ನು ಈ ರಾಜ್ಯದ ಮುಖ್ಯಮಂತ್ರಿಯಾಗಿ ಮಾಡಿತ್ತು. ಈಗ ಅವರು ಅದೇ ಹಸಿರು ಶಾಲಿನ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಎಂದರೆ ಇದರ ಬಗ್ಗೆ ರಾಜ್ಯದ ಜನತೆ ತೀರ್ಮಾನ ಮಾಡಲಿ.
ಸಿದ್ದರಾಮಯ್ಯನವರು ಯಡಿಯೂರಪ್ಪನವರನ್ನು ಭೇಟಿ ಮಾಡಿರುವ ಬಗ್ಗೆ ಅವರನ್ನೇ ಕೇಳಬೇಕು. ನನಗೆ ಗೊತ್ತಿಲ್ಲದ ವಿಚಾರದ ಬಗ್ಗೆ ನಾನೇನು ಹೇಳಲಿ? ಎಂದರು.

Exit mobile version