ಸಾಹಿತಿಗಳ ಕೂದಲು ಕೊಂಕಾದರು ಕಾಂಗ್ರೆಸ್ ಸುಮ್ಮನಿರುವುದಿಲ್ಲ : ಬಿ.ಕೆ.ಹರಿಪ್ರಸಾದ್!

bk hariprasad

ರಾಜ್ಯದಲ್ಲಿ ಅರಾಜಕತೆ ‌ನಿರ್ಮಾಣವಾಗುತ್ತಿದೆ. ಸರ್ಕಾರದ ವಿರುದ್ಧ ಮಾತನಾಡಿದವರಿಗೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಈಗ ರಾಜ್ಯದ ಅನೇಕ ಪ್ರಗತಿಪರ ಸಾಹಿತಿಗಳಿಗೆ ಕೆಲ ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. ಸಾಹಿತಿಗಳ ಕೂದಲು ಕೊಂಕಾದರು ಕಾಂಗ್ರೆಸ್ ಪಕ್ಷ ಸುಮ್ಮನಿರುವುದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋಮುಸಂಘರ್ಷ ಹೆಚ್ಚುತ್ತಿದೆ.ಈಗಾಗಲೇ ಎಂ.ಎಂ.ಕಲಬುರ್ಗಿ, ಪನ್ಸಾರೆ, ಗೌರಿ ಲಂಕೇಶ್ ಅವರ ಹತ್ಯೆ ಮಾಡಲಾಗಿದೆ. ಹತ್ಯೆ ಮಾಡುವ ಮೂಲಕ ಧ್ವನಿ ಅಡಗಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಅದಕ್ಕೆ ಅವಕಾಶ ನೀಡುವುದಿಲ್ಲ. ಭಾರತದ ಏಕತೆಗಾಗಿ ನಾವು ಹೋರಾಡುತ್ತೇವೆ. ಈ ಹಿಂದೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪಕ್ಷ ನಮ್ಮದು, ಈಗ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ಮಾಡಲಾಗುವುದು ಎಂದರು.

ಇನ್ನು ಸಾರ್ವಜನಿಕ ಕ್ಷೇತ್ರದಲ್ಲಿ ಇರುವಾಗ ಈ ರೀತಿಯ ಬೆದರಿಕೆಗಳು ಸಾಮಾನ್ಯ. ಇಂತಹ ಬೆದರಿಕೆಗಳಿಗೆ ಹೆದರಬಾರದು. ಯಾರೂ ಎದೆಗುಂದಬಾರದು. ಇನ್ನು ಮರಕೋತಿ ಆಡುವ ಭಜರಂಗದಳದ ವ್ಯಕ್ತಿಯನ್ನು ರಾಜ್ಯದ ಗೃಹಮಂತ್ರಿಯನ್ನಾಗಿ ಮಾಡಲಾಗಿದೆ. ಇದು ರಾಜ್ಯದ ದುರದೃಷ್ಟ. ಸಮಾಜವನ್ನು ಒಡೆಯುವ ಕೆಲಸಗಳಿಗೆ ಕುಮ್ಮಕ್ಕು ನೀಡಿದರೆ ಅದನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಸಹಿಸುವುದಿಲ್ಲ. ಸರ್ಕಾರ ಹೀಗೆ ಮಾಡುತ್ತಾ ಹೋದರೆ, ದೊಡ್ಡ ಮಟ್ಟದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇನ್ನು ಕಳೆದ ಕೆಲ ದಿನಗಳ ಹಿಂದೆ ೬೧ ಸಾಹಿತಿಗಳು ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಮತ್ತು ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸದಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಹೀಗಾಗಿ ಕೆಲ ಅಪರಿಚಿತರು ಸಾಹಿತಿಗಳಿಗೆ ಕೊಲೆ ಬೆದರಿಕೆ ಹಾಕಿದ್ದರು.

Exit mobile version