ನಾಳೆಯಿಂದ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ

ಬೆಂಗಳೂರು ಸೆ 25 :  ರಾಜ್ಯದ ಜನತೆಗೆ ಸರ್ಕಾರ ಹೊಸ ಸುದ್ದಿ ನೀಡಿದ್ದು, ಭಾನುವಾರದಿಂದ ಬೆಂಗಳೂರಿನಲ್ಲಿ  ಮೊದಲ ಎಲೆಕ್ಟ್ರಿಕ್ ಬಸ್ ಸಂಚಹರಿಸಲಿದ್ದು, ಅದನ್ನು ಕೆಂಗೇರಿ ಮೆಟ್ರೊ ನಿಲ್ದಾಣದಲ್ಲಿ ನಿಯೋಜಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಎನ್‌ಟಿಪಿಸಿ ಮತ್ತು ಜೆಬಿಎಂ ಆಟೋ ಕಂಪೆನಿಗಳು ಜಂಟಿಯಾಗಿ 9 ಮೀಟರ್ ಉದ್ದದ 90 ನಾನ್-ಎಸಿ ಎಲೆಕ್ಟ್ರಿಕ್ ಬಸ್‌ ಗಳನ್ನು ಒದಗಿಸುವ ಕೆಲಸವನ್ನು ವಹಿಸಿಕೊಂಡಿವೆ.

ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ 90 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು 2020ರ ಫೆಬ್ರುವರಿಯಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಎಲೆಕ್ಟ್ರಿಕ್ ಬಸ್‌ನಲ್ಲಿ ಸುಮಾರು 30 – 35 ಪ್ರಯಾಣಿಕರು ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಈ ಎಲೆಕ್ಟ್ರಿಕ್ ಬಸ್‌ಗಳನ್ನು ಮುಖ್ಯವಾಗಿ ಈ ಮೆಟ್ರೋ ನಿಲ್ದಾಣಗಳಲ್ಲಿ ಬರುವಂತಹ ಪ್ರಯಾಣಿಕರಿಗೆ ಬೇರೆ ಏರಿಯಾಗಳಿಗೆ ಪ್ರಯಾಣಿಸಲು ಅನುಕೂಲವಾಗಲು ಬಳಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು ರಸ್ತೆ, ಬೈಯಪ್ಪನಹಳ್ಳಿ, ಬನಶಂಕರಿ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳಲ್ಲಿ ಈ ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸುವ ಯೋಜನೆ ಹೊಂದಿದ್ದಾರೆ. ಭಾನುವಾರದಂದು ಬರಲಿರುವ ಮೊದಲ ಎಲೆಕ್ಟ್ರಿಕ್ ಬಸ್ ಅನ್ನು ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಸೌಲಭ್ಯಕ್ಕಾಗಿ ನಿಯೋಜಿಸಲಾಗುವುದು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಮೊದಲ ಎಲೆಕ್ಟ್ರಿಕ್ ಬಸ್ ಉತ್ತರ ಪ್ರದೇಶದ ಮಥುರಾ ಬಳಿಯಿರುವಂತಹ ಕೋಸಿಯಲ್ಲಿರುವ ಜೆಬಿಎಂ ಬಸ್ ಪ್ಲ್ಯಾಂಟ್‌ನಿಂದ ಬುಧವಾರ ರಾತ್ರಿಯೇ ಅಲ್ಲಿಂದ ಹೊರಟಿದ್ದು, ಬೆಂಗಳೂರಿಗೆ ಭಾನುವಾರದಂದು ಬಂದು ತಲುಪುವ ನಿರೀಕ್ಷೆಯಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಎಲೆಕ್ಟ್ರಿಕ್ ಬಸ್‌ಗಳನ್ನು ಜೂನ್ 2021ರಿಂದಲೇ ಹಂತ ಹಂತವಾಗಿ ಮೆಟ್ರೋ ನಿಲ್ದಾಣಗಳಲ್ಲಿ ನಿಯೋಜಿಸಬೇಕಿತ್ತು, ಆದರೆ ಕಾರಣಾಂತರಗಳಿಂದ ಎನ್‌ಟಿಪಿಸಿ ಮತ್ತು ಜೆಬಿಎಂ ನೀಡಿದಂತಹ ಅವಧಿಯನ್ನು ಮೀರಿದ್ದು, ಡಿಸೆಂಬರ್ 15ರೊಳಗೆ ಉಳಿದಂತಹ 89 ಎಲೆಕ್ಟ್ರಿಕ್ ಬಸ್‌ಗಳನ್ನು ಹಂತ ಹಂತವಾಗಿ ಒದಗಿಸುವುದಾಗಿ ತಿಳಿಸಿದ್ದಾರೆ ಎಂದೂ ಹೇಳಿದ್ದಾರೆ.

ಮೊದಲಿಗೆ ಈ ಎಲೆಕ್ಟ್ರಿಕ್ ಬಸ್‌ಗಳಲ್ಲಿ ನಿರ್ವಾಹಕರಿಲ್ಲದೆ ಕೇವಲ ಚಾಲಕರನ್ನು ಮಾತ್ರ ಇದರಲ್ಲಿ ನಿಯೋಜಿಸಬೇಕು ಎಂದುಕೊಂಡಿದ್ದರು. ಆದರೆ, ಈಗ ಈ ಬಸ್‌ಗಳಲ್ಲಿ ನಿರ್ವಾಹಕರಿದ್ದು ಮತ್ತು ಚಾಲಕರನ್ನು ಎನ್‌ಟಿಪಿಸಿ ಮತ್ತು ಜೆಬಿಎಂ ಅವರೇ ನಿಯೋಜಿಸಲಿದ್ದು ಈ ಬಸ್‌ಗಳ ನಿರ್ವಹಣೆಯನ್ನೂ ಇವರೇ ಮಾಡಲಿದ್ದಾರೆ. ಈ ಬಸ್‌ಗಳನ್ನು 12 ವರ್ಷಗಳ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿದ್ದು, ಬಿಎಂಟಿಸಿ ಪ್ರತಿ ಕಿಲೋ ಮೀಟರ್ ಆಧರಿಸಿ ಅವರಿಗೆ ಹಣ ನೀಡಲಿದ್ದಾರೆಂದು ಹೇಳಲಾಗುತ್ತಿದೆ

Exit mobile version