`ಬ್ರೇಕ್ ಫೈಲ್ಯೂರ್’ ಪೋಸ್ಟರ್ ಬಿಡುಗಡೆ

ನಾಲ್ಕು ಜನ ಸ್ನೇಹಿತರು ಅನಿರೀಕ್ಷಿತವಾಗಿ ಕಾಡೊಂದಕ್ಕೆ ಹೊಗುವುದು ಮತ್ತು ಅಲ್ಲಿ ಇದ್ದಕ್ಕಿದ್ದಂತೆ ಎದುರಾಗುವ ವ್ಯಕ್ತಿಯೊಂದಿಗೆ ಹೋರಾಡಬೇಕಾಗಿ ಬರುವ ಕತೆ ಬ್ರೇಕ್ ಫೈಲ್ಯೂರ್ ಚಿತ್ರದ್ದು. ಅಪರಿಚಿತನಿಂದ ನಾಯಕ ಹೇಗೆ ಪಾರಾಗುತ್ತಾನೆ ಎನ್ನುವುದೇ ಚಿತ್ರದ ತಿರುಳು ಎಂದರು ಚಿತ್ರದ ನಾಯಕ ಮತ್ತು ನಿರ್ದೇಶಕರಾದ ಅದಿತ್ ನವೀನ್. ಅವರಿಗೆ ಇದು ಪ್ರಥಮ ಚಿತ್ರ. ಆದರೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವಿ. ಅದಿತ್ ನವೀನ್ ಅವರು ಚಿತ್ರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ಈ ವಿಚಾರವನ್ನು ತಿಳಿಸಿದರು.

ಚಿತ್ರ ತಂಡದಲ್ಲಿ ಹೊಸಬರೇ ತುಂಬಿದ್ದಾರೆ. ಅವರ ನಡುವೆ `ಉಗ್ರಂ’ ಖ್ಯಾತಿಯ ರವಿ ಕಾಡು ಮನುಷ್ಯನ ಪಾತ್ರಧಾರಿ. ದಾಂಡೇಲಿಯ ಕಾಡಲ್ಲಿ ಚಿತ್ರೀಕರಿಸುವಾಗ ಭಯಾನಕ ಕೇಳಿ ಬರುತ್ತಿತ್ತು. ನಿಜಕ್ಕೂ ಅದು ಮರೆಯಲಾಗದ ಅನುಭವ ಎಂದು ರವಿ ಹೇಳಿದರು. ಚಿತ್ರದ ಪೋಸ್ಟರ್ ಲಾಂಚ್ ಮಾಡಲು ಅತಿಥಿಯಾಗಿ ಆಗಮಿಸಿದ್ದ ಚಿನ್ನೇಗೌಡರು ಮಾತನಾಡಿ, “ವಾಸ್ತವದಲ್ಲಿ ಈ ಚಿತ್ರದ ಪೋಸ್ಟರ್ ಲಾಂಚ್ ಮಾಡಲು ನನ್ನ ಮಗ ಶ್ರೀಮುರಳಿ ಬರಬೇಕಿತ್ತು. ಆದರೆ ಆತನಿಗೆ ಅನಾರೋಗ್ಯವಿದ್ದ ಕಾರಣ, ನಾನು ಬಂದಿದ್ದೇನೆ. ಚಿತ್ರದಲ್ಲಿ ರವಿ ನಟಿಸುತ್ತಿದ್ದಾರೆ. ಅವರನ್ನು ನೋಡಿದರೆ ನನಗೆ ಉಗ್ರಂ ಸಿನಿಮಾನೇ ನೆನಪಾಗುತ್ತದೆ. ಅವರಿಗೂ ಚಿತ್ರತಂಡಕ್ಕೂ ಶುಭಾಶಯಗಳು. ನಿರ್ದೇಶಕರು ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಿರ್ಮಾಪಕರನ್ನು ಸ್ಮರಿಸಲೇಬೇಕು. ನಿರ್ಮಾಪಕರು ಇದ್ದರಷ್ಟೇ ನಾವೆಲ್ಲ” ಎಂದು ಮೆಚ್ಚುಗೆಯ ಮಾತನಾಡಿ, ಶುಭ ಕೋರಿದರು.

ಚಿತ್ರವನ್ನು ಅಬ್ದುಲ್ ಗನಿ ತಾಳಿಕೋಟೆ ನಿರ್ಮಿಸಿದ್ದು , ಅವರ ಜೊತೆಗೆ ಐದು ಮಂದಿ ಸ್ನೇಹಿತರು ಚಿತ್ರಕ್ಕೆ ಹಣಹೂಡಿಕೆ ಮಾಡಿರುವುದಾಗಿ ತಿಳಿದು ಬಂದಿದೆ.
ಕೆವಿನ್ ಮತ್ತು ಅಭಿಷೇಕ್ ರಾಯ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿರುವ ನಟಿ ಅಂಜಲಿ ಮಾತನಾಡಿ “ಇದು ನನ್ನ ಎರಡನೇ ಚಿತ್ರ. ಈ ಹಿಂದೆ ಒಂದು ಚಿತ್ರದಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸಿದ್ದೆ. ಮಾಡೆಲಿಂಗ್ ಕ್ಷೇತ್ರದಿಂದ ಬಂದಿರುವ ನನಗೆ ಸಿನಿಮಾದಲ್ಲಿನ ಅನುಭವ ಹೊಸತು” ಎಂದರು. ವೇದಿಕೆಯಲ್ಲಿ ಚಿತ್ರದ ನಾಯಕಿ ಕೃತಿ ಗೌಡ ಸೇರಿದಂತೆ ಕಲಾವಿದರಾದ ರೇಚಲ್, ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.

Exit mobile version