ಬ್ರಿಸ್ಬೇನ್ ಟೆಸ್ಟ್: ಟೀಂ ಇಂಡಿಯಾಕ್ಕೆ ಭರ್ಜರಿ ಜಯ; ಇತಿಹಾಸ ಸೃಷ್ಟಿಸಿದ ರಹಾನೆ ಪಡೆ

ಬ್ರಿಸ್ಬೇನ್, ಜ. 19: ಆಸ್ಟ್ರೇಲಿಯಾ ತಂಡದ ಬಲಿಷ್ಠ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಟೀಂ ಇಂಡಿಯಾ ಆಟಗಾರರು, ನಾಲ್ಕನೇ ಟೆಸ್ಟ್‌ನಲ್ಲಿ 3 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಬಾರ್ಡರ್-ಗವಾಸ್ಕರ್ ಟ್ರೋಫಿ ಮುಡಿಗೇರಿಸಿಕೊಂಡಿದೆ.

ಇಲ್ಲಿನ ಗಾಬಾ ಮೈದಾನದಲ್ಲಿ ನಡೆದ ಪಂದ್ಯದ ಅಂತಿಮ ದಿನದಾಟದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದರು. ದಿನದಾಟದ ಆರಂಭದಲ್ಲೇ ರೋಹಿತ್ ಶರ್ಮಾ(7) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ನಂತರ ಜೊತೆಯಾದ ಶುಭ್ಮನ್ ಗಿಲ್(91) ಹಾಗೂ ಚೇತೇಶ್ವರ್ ಪೂಜಾರ(56) ಅಮೋಘ ಜೊತೆಯಾಟದ ಮೂಲಕ ಚೇತರಿಕೆ ನೀಡಿದರು. ಕಾಂಗರೂ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಗಿಲ್, ಶತಕದ ಹೊಸ್ತಿಲಲ್ಲಿ ಮುಗ್ಗರಿಸಿದರು. ನಂತರ ಬಂದ ನಾಯಕ ರಹಾನೆ(24), ಮಯಾಂಕ್ ಅಗರ್ವಾಲ್(9) ಬಹುಬೇಗನೆ ನಿರ್ಗಮಿಸಿದರು.

ಇದಾದ ನಂತರ ಜೊತೆಯಾದ ರಿಷಭ್ ಪಂತ್(89*) ಹಾಗೂ ವಾಷಿಂಗ್ಟನ್ ಸುಂದರ್(22) ಭರ್ಜರಿ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಇನ್ನಿಂಗ್ಸ್ ಕೊನೆಯವರೆಗೂ ಜವಾಬ್ದಾರಿಯುತ ಆಟವಾಡಿದ ಪಂತ್, ಆಸೀಸ್ ಬೌಲರ್‌ಗಳ ಬೆವರಿಳಿಸಿದರು. ಪರಿಣಾಮ ಭಾರತ ತಂಡಕ್ಕೆ 3 ವಿಕೆಟ್‌ಗಳ ಗೆಲುವು ತಂದುಕೊಟ್ಟರು.

ಈ ಗೆಲುವಿನೊಂದಿಗೆ ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಮುನ್ನಡೆ ಸಾಧಿಸಿತು. ಅಲ್ಲದೆ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಈ ಗೆಲುವಿನೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದರೆ. ಟೆಸ್ಟ್ ಸರಣಿ ಸೋಲಿನಿಂದ ಕಂಗೆಟ್ಟ ಆಸೀಸ್ ಮೂರನೇ ಸ್ಥಾನಕ್ಕೆ ಕುಸಿಯಿತು.

ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ರಿಷಭ್ ಪಂತ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರೆ. ಸರಣಿಯಲ್ಲಿ ಆಸೀಸ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಪ್ಯಾಟ್ ಕಮಿನ್ಸ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಇನ್ನೂ, ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಪ್ರಧಾನಿ ಮೋದಿ ಸೇರಿದಂತೆ ಹಾಲಿ, ಮಾಜಿ ಕ್ರಿಕೆಟಿಗರು, ಸಿನಿಮಾ ನಟ-ನಟಿಯರು ರಹಾನೆ ಪಡೆಗೆ ಅಭಿನಂದನೆ ಸಲ್ಲಿಸಿದ್ದಾರೆ.

Exit mobile version