ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಯಡಿಯೂರಪ್ಪ !

BS yediyurappa

ರಾಜ್ಯ ರಾಜಕೀಯದಲ್ಲಿ ರಾಜಾಹುಲಿ ಎಂದೇ ಖ್ಯಾತಿಗಳಿಸಿಕೊಂಡ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಿನಿಮಾ ಒಂದಕ್ಕೆ ಬಣ್ಣ ಹಚ್ಚಲಿದ್ದಾರೆ. ಇದರೊಂದಿಗೆ ರಾಜಕೀಯಕ್ಕೂ ಸೈ, ಸಿನಿಮಾಕ್ಕೂ ಸೈ, ಎಂದು ತೋರಿಸಿಕೊಟ್ಟಿದ್ದಾರೆ.

ತನುಜಾ ಎಂಬ ಹೆಸರಿನ ಈ ಸಿನಿಮಾದಲ್ಲಿ ಬಿಎಸ್ ವೈ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಬಿಎಸ್ ವೈ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ತನುಜಾ ಎಂಬ ಹೆಣ್ಣುಮಗಳು ಕೋವಿಡ್ ಕಾರಣದಿಂದ ನೀಟ್ ಪರೀಕ್ಷೆ ಬರೆಯಲಾಗದೆ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದರು. ಈ ವೇಳೆ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಸೇರಿದಂತೆ ಮಾಧ್ಯಮಗಳು ಸರ್ಕಾರದ ಗಮನ ಸೆಳೆದಿದ್ದರು. ಹೀಗಾಗಿ ಸರ್ಕಾರ ಆಕೆಯ ಸಹಾಯಕ್ಕೆ ನಿಂತಿತ್ತು. ಹೀಗೆ ಎಲ್ಲರ ಸಹಕಾರದಿಂದ ತನುಜಾ ಪರೀಕ್ಷೆ ಬರೆದು ನೀಟ್ ಪಾಸಾಗಿದ್ದು ಇಡೀ ದೇಶದ ಗಮನ ಸೆಳೆದಿತ್ತು. ಪರೀಕ್ಷೆ ಬರೆಯಲು ಸುಮಾರು 350ಕಿಮೀ ದೂರ ಪ್ರಯಾಣ ಮಾಡಿ ಬಂದ ವಿದ್ಯಾರ್ಥಿನಿಯ ಸಾಹಸವನ್ನು ರಾಜ್ಯಪ್ರಶಸ್ತಿ ವಿಜೇತ ಹರೀಶ್ ಎಂ.ಡಿ ಹಳ್ಳಿಯವರು ಚಿತ್ರರೂಪಕ್ಕೆ ತರುತ್ತಿದ್ದು ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಇದೇ ಸಿನಿಮಾಕ್ಕೆ ಮಾಜಿ ಸಿಎಂ ಬಿಎಸ್ ವೈ ಮುಖ್ಯಮಂತ್ರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಬೆಂಗಳೂರಿನ ಹೊರವಲಯದಲ್ಲಿ ಮೊದಲ ದಿನದ ಅವರ ಭಾಗದ ಚಿತ್ರೀಕರಣ ಯಶಸ್ವಿಯಾಗಿ ನಡೆದಿದ್ದು ಅತ್ಯದ್ಭುತವಾಗಿ ನಟಿಸಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. “ತನುಜಾ” ಚಿತ್ರ ನೈಜ ಘಟನೆಯಾಧಾರಿತ ವಾಗಿದ್ದು ಶಿವಮೊಗ್ಗದ ಹಾಗೂ ಬೆಂಗಳೂರಿನ ಹಲವೆಡೆ ಚಿತ್ರೀಕರಣ ಗೊಂಡಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಅಭಿನಯಿಸಿದ್ದ ಸಪ್ತ ಪಾವೂರು ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದು ತಾರಾಗಣದಲ್ಲಿ ಬಿ.ಎಸ್ ಯಡಿಯೂರಪ್ಪ ವಿಶ್ವೇಶ್ವರಯ್ಯ ಭಟ್, ಡಾ.ಕೆ ಸುಧಾಕರ್, ರಾಜೇಶ್ ನಟರಂಗ, ಕೈಲಾಶ್, ಸಂಧ್ಯಾ ಅರಕೆರೆ, ಬೇಬಿ ಶ್ರೀ, ಅಭಿನಯಿಸುತ್ತಿದ್ದಾರೆ

ಪ್ರದ್ಯೋತನ ಸಂಗೀತ ನಿರ್ದೇಶನ ಹಾಗೂ ರವೀಂದ್ರನಾಥ್ ಅವರ ಛಾಯಾಗ್ರಹಣ, ಉಮೇಶ್ ಆರ್.ಬಿ ಸಂಕಲನವಿದ್ದು ಆರ್ ಚಂದ್ರಶೇಖರ್ ಪ್ರಸಾದ್ ಹಾಗೂ ಜೆ.ಎಂ ಪ್ರಹ್ಲಾದ್ ಸಂಭಾಷಣೆ ಬರೆದಿದ್ದು ನಿರ್ದೇಶಕ ಹರೀಶ್ ಎಂ.ಡಿ ಹಳ್ಳಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

Exit mobile version