ಭಾರತದಿಂದ ಬರುವ ವಿಮಾನಗಳ ಮೇಲಿನ ನಿರ್ಬಂಧ ಸೆ.21ರವರೆಗೆ ವಿಸ್ತರಿಸಿದ ಕೆನಡಾ

ಟೊರೊಂಟೊ, ಆ. 11: ಕೊರೊನಾ ಹರಡುವಿಕೆಯನ್ನು ತಡೆಯಲು ಭಾರತದಿಂದ ನೇರವಾಗಿ ಕೆನಡಾಕ್ಕೆ ಬರುವ ಪ್ರಯಾಣಿಕರ ವಿಮಾನಗಳ ಮೇಲೆ ಹೇರಿದ್ದ ನಿರ್ಬಂಧವನ್ನು ಸೆಪ್ಟೆಂಬರ್‌ 21ರವರೆಗೆ ವಿಸ್ತರಿಸಿದೆ ಎಂದು ಫೆಡರಲ್‌ ಸಾರಿಗೆ ಸಚಿವಾಲಯವು ತಿಳಿಸಿದೆ.

ಕೆನಡಾದ ನಾಗರಿಕರ ಆರೋಗ್ಯ ಮತ್ತು ಸುರಕ್ಷತೆಯ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದೆ. ಹಾಗಾಗಿ ಸಾರ್ವಜನಿಕ ಆರೋಗ್ಯ ಇಲಾಖೆಯ ಮಾಹಿತಿಯನ್ನು ಪರಿಶೀಲಿಸಿದ ನಂತರ, ಕೆನಡಾ ಮತ್ತು ಭಾರತದ ನಡುವಿನ ನೇರ ವಿಮಾನದ ಮೇಲಿನ ನಿಷೇಧವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಕೆನಡಾದ ಸಾರಿಗೆ ಸಚಿವ ಒಮರ್‌ ಅಲ್ಗಾಬ್ರಾ ಅವರು ಟ್ವೀಟ್‌ ಮಾಡಿದ್ದಾರೆ.

ಕೆನಡಾ ಸರ್ಕಾರವು ಸೆಪ್ಟೆಂಬರ್ 21 ರವರೆಗೆ ಭಾರತದಿಂದ ನೇರ ವಿಮಾನವನ್ನು ಸ್ಥಗಿತಗೊಳಿಸಿದೆ. ಈ ಅವಧಿಯಲ್ಲಿ ಭಾರತದಿಂದ ಪರೋಕ್ಷ ಮಾರ್ಗದ ಮೂಲಕ ಕೆನಡಾಗೆ ಪ್ರಯಾಣಿಸುವವರು ಮೂರನೇ ದೇಶದಿಂದ ಕೋವಿಡ್‌ ಪರೀಕ್ಷೆಯ ನೆಗೆಟಿವ್‌ ವರದಿಯನ್ನು ಪಡೆದಿರಬೇಕು ಎಂದು ಅವರು ತಿಳಿಸಿದ್ದಾರೆ.

ಏಪ್ರಿಲ್‌ನಲ್ಲಿ ಭಾರತದಲ್ಲಿ ಕೋವಿಡ್ ಉತ್ತುಂಗದಲ್ಲಿದ್ದಾಗ ಕೆನಡಾವು ಭಾರತದಿಂದ ನೇರವಾಗಿ ಆಗಮಿಸುವ ಮತ್ತು ಭಾರತಕ್ಕೆ ತೆರಳುವ ಎಲ್ಲಾ ವಿಮಾನಗಳ ಮೇಲೆ ನಿರ್ಬಂಧ ಹೇರಿತ್ತು. ಈ ನಿರ್ಬಂಧವು ಸರಕು ಸಾಗಣೆ, ವೈದ್ಯಕೀಯ ಮತ್ತು ಸೇನಾ ವಿಮಾನಗಳಿಗೆ ಅನ್ವಯಿಸುವುದಿಲ್ಲ.

Exit mobile version