ಕ್ಯಾಪ್ಸುಲ್ಸ್‌, ಸಿರಿಂಜ್‍ನಲ್ಲಿ ಅರಳಿದ ದೇವಿ ವಿಗ್ರಹ

ಅಸ್ಸಾಂ, ಅ. 23: ಕೊರೊನಾ ಸೋಂಕು ಪ್ರಭಾವದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಅಸ್ಸಾಂ ಕಲಾವಿದರೊಬ್ಬರು ಅವಧಿ ಮೀರಿದ ಟ್ಯಾಬ್ಲೆಟ್‌ಗಳು, ಕ್ಯಾಪ್ಸುಲ್‌ಗಳು ಮತ್ತು ಇಂಜೆಕ್ಷನ್ ಬಾಟಲುಗಳಿಂದ ದುರ್ಗಾಮಾತೆಯ ವಿಗ್ರಹವನ್ನು ರಚಿಸಿದ್ದಾರೆ.

37 ವರ್ಷದ ಕಲಾವಿದ ಸಂಜಿಬ್ ಬಸಕ್ ಅವರು ಸರ್ಕಾರಿ ನೌಕರರಾಗಿದ್ದು ಕಳೆದ ಹಲವು ವರ್ಷಗಳಿಂದ, ವಿಗ್ರಹ ವಿನ್ಯಾಸ ಮಾಡುವ ಕಾರ್ಯವನ್ನು ಕೂಡಾ ಮಾಡಿಕೊಂಡು ಬಂದಿ‌ದ್ದಾರೆ.
ಹಲವು ವರ್ಷಗಳಿಂದ ಪ್ರಕೃತಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಗ್ರಹ ರಚಿಸುತ್ತಿರುವ ಕಲಾವಿದ ಸಂಜಿಬ್ ಬಸಕ್ ಈ ಬಾರಿ ಕೊರೊನಾ ಸೋಂಕು ಪ್ರಭಾವ ಬಿಂಬಿಸಲು ಅವಧಿ ಮೀರಿದ ಔಷಧಿ ಮತ್ತು ಇಂಜೆಕ್ಷನ್‌ನಿಂದ ವಿಗ್ರಹವನ್ನು ರಚಿಸಿದ್ದಾರೆ. ಇದಕ್ಕಾಗಿ ಕಳೆದ ಐದು ತಿಂಗಳಿಂದ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಸುಮಾರು 40,000 ಸ್ಟ್ರಿಪ್ ಮಾತ್ರೆಗಳು, ಕ್ಯಾಪ್ಸುಲ್‌ಗಳನ್ನು ಮತ್ತು ವಿವಿಧ ಬಣ್ಣಗಳ ಇಂಜೆಕ್ಷನ್ ಬಾಟಲುಗಳನ್ನು ಅವರು ಸಂಗ್ರಹಿಸಿದ್ದಾರೆ.

ಈ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿರುವ ಅವರು, ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಜನರು ತಮಗೆ ಬೇಕಾದ ಔಷಧಿಗಳ ಖರೀದಿಗಾಗಿ ಮೆಡಿಕಲ್‌ಗಳ ಮುಂದೆ ಸಾಲಿನಲ್ಲಿ ನಿಂತಿರುವುದನ್ನು ನಾನು ನೋಡಿದ್ದು ಆ ಸಂದರ್ಭದಲ್ಲಿ ಈ ಬಾರಿ ಕೊರೊನಾ ಪ್ರಭಾವ ಬಿಂಬಿಸುವ ಔಷಧಿಯಿಂದ ದುರ್ಗಾಮಾತೆಯ ವಿಗ್ರಹವನ್ನು ರಚಿಸಬಹುದು ಎಂಬ ಆಲೋಚನೆ ಹೊಳೆಯಿತು ಎಂದು ಹೇಳಿದ್ದಾರೆ.

Exit mobile version