ಭ್ರಷ್ಟಾಚಾರ ಪ್ರಕರಣ: ಮಹಾರಾಷ್ಟ್ರ ಮಾಜಿ ಗೃಹಸಚಿವ ಅನಿಲ್​ ದೇಶಮುಖ್​ ವಿರುದ್ಧ ಎಫ್​ಐಆರ್ ದಾಖಲಿಸಿದ ಸಿಬಿಐ

ಮಹಾರಾಷ್ಟ್ರ, ಏ. 24: ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್​ ಬೀರ್​ ಸಿಂಗ್​ ಮಾಡಿದ್ದ ಭ್ರಷ್ಟಾಚಾರ, ಅವ್ಯವಹಾರ ಆರೋಪಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಮಾಜಿ ಗೃಹಸಚಿವ ಅನಿಲ್ ದೇಶ್​​ಮುಖ್​ ವಿರುದ್ಧ ಸಿಬಿಐ ಎಫ್ಐಆರ್​ ದಾಖಲಿಸಿದೆ. ಹಾಗೇ ಅನಿಲ್ ದೇಶ್​​ಮುಖ್​ಗೆ ಸಂಬಂಧಪಟ್ಟ ಹಲವು ಪ್ರದೇಶಗಳನ್ನು ರೇಡ್​ ಮಾಡಿದೆ. ಅನಿಲ್​ ದೇಶಮುಖ್​ ಅವರು ತಮ್ಮ ಅಧೀನ ಅಧಿಕಾರಿಗಳ ಮೂಲಕ ಮುಂಬೈನ ಬಾರ್​, ರೆಸ್ಟೋರೆಂಟ್, ಹೋಟೆಲ್​​ಗಳಿಂದ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದಾರೆ. ಈ ಮೂಲಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಪರಮ್​ಬೀರ್ ಸಿಂಗ್​ ಅವರು ಮುಖ್ಯಮಂತ್ರಿ ಉದ್ಧವ್​ ಠಾಕ್ರೆಯವರಿಗೆ ಪತ್ರ ಬರೆದಿದ್ದರು. ಈ ಪತ್ರದ ಅನ್ವಯ ಏಪ್ರಿಲ್​ 14ರಂದು ಸಿಬಿಐ ಅನಿಲ್​ ದೇಶ​​ಮುಖ್​​ಗೆ ಸಮನ್ಸ್​ ನೀಡಿತ್ತು.

ಮುಂಬೈನ ಬಾರ್​, ಹೊಟೆಲ್, ರೆಸ್ಟೋರೆಂಟ್​ ಮತ್ತಿತರ ಮೂಲಗಳಿಂದ ತಿಂಗಳಿಗೆ 100 ಕೋಟಿ ರೂಪಾಯಿ ಸಂಗ್ರಹಿಸುವಂತೆ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಹೇಳಿದ್ದರು ಎಂದು ಪರಮ್​ಬೀರ್ ಸಿಂಗ್​ ತಮ್ಮ ಪತ್ರದಲ್ಲಿ ಉಲ್ಲೇಖಿಸಿ, ಆರೋಪ ಮಾಡಿದ್ದರು.

ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ, ಅನಿಲ್​ ದೇಶಮುಖ್​ ಅವರ ಆಪ್ತ ಸಹಾಯಕರಾದ ಸಂಜೀವ್​ ಪಾಲಂದೆ ಮತ್ತು ಕುಂದಾನ್​ ಶಿಂಧೆ, ಮಾಜಿ ಪೊಲೀಸ್ ಅಧಿಕಾರಿ ಸಚಿನ್​ ವಾಝೆಯ ಇಬ್ಬರು ಚಾಲಕರು, ಬಾರ್​ ಮಾಲೀಕರು, ಮುಂಬೈ ಪೊಲೀಸ್ ಅಧಿಕಾರಿಗಳು ಹಾಗೂ ದೇಶಮುಖ್​ರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದವರನ್ನೂ ಸಿಬಿಐ ಈಗಾಗಲೇ ವಿಚಾರಣೆಗೆ ಒಳಪಡಿಸಿದೆ.

Exit mobile version