ಚಂದನ್ ಶೆಟ್ಟಿಯ ‘ಪಾರ್ಟಿ ಫ್ರೀಕ್’

ಕನ್ನಡದ ಜನಪ್ರಿಯ ರ‌್ಯಾಪ್ ಸಿಂಗರ್ ಚಂದನ್ ಶೆಟ್ಟಿಯವರ ಹೊಸ ಹಾಡು ‘ಪಾರ್ಟಿ ಫ್ರೀಕ್’ ಬಿಡುಗಡೆಯಾಗಿದೆ. ಹಾಡು ಬಿಡುಗಡೆಗೊಳಿಸಿದ ಬಳಿಕ ಅವರು ಹಾಡಿನ ಮೇಕಿಂಗ್ ಮತ್ತಿತರ ವಿಶೇಷತೆಗಳ ಬಗ್ಗೆ ಮಾಧ್ಯಮದ ಜೊತೆಗೆ ಮಾತನಾಡಿದರು.

“ಇದು‌ ನಾನು ಲಾಕ್ಡೌನ್ ಟೈಮಲ್ಲಿ ಬರೆದ ಹಾಡು. ಸೋಮವಾರದಿಂದ ಶನಿವಾರದವರೆಗೆ ಶ್ರಮವಹಿಸಿ ಕೆಲಸ ಮಾಡುವವರು ವಾರಾಂತ್ಯದಲ್ಲಿ ನಡೆಸುವ ಪಾರ್ಟಿಯನ್ನು ಮನದಲ್ಲಿ ಇಟ್ಕೊಂಡೇ ಮಾಡಿರೋ ಹಾಡಿದು. ಅದನ್ನೇ ಲಿರಿಕ್ಸಲ್ಲೂ ಬರೆದಿದ್ದೇನೆ.

‘ಯುನೈಟೆಡ್’ ಎನ್ನುವುದು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಚಾನೆಲ್. ಅದಕ್ಕೊಂದು ಅದ್ಧೂರಿ ಆರಂಭವನ್ನು ಪಾರ್ಟಿ ಫ್ರೀಕ್ ಹಾಡಿನ‌ ಮೂಲಕ ಶುರು ಮಾಡಿದ್ದೇವೆ. ಈ‌ ಹಾಡು ತೆಲುಗಲ್ಲಿಯೂ ಬಿಡುಗಡೆಯಾಗಲಿದೆ” ಎಂದು ಚಂದನ್ ಶೆಟ್ಟಿ ಹೇಳಿದರು. ನನಗೆ ಮೊದಲನೇ ದೊಡ್ಡ ಹಿಟ್ ನೀಡಿದ ಛಾಯಾಗ್ರಾಹಕ ಶ್ರೀಶ ಅವರೇ ಇದಕ್ಕೂ ಕೆಲಸ ಮಾಡಿದ್ದಾರೆ ಎಂದು ಚಂದನ್ ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಟ ಧರ್ಮ ಮಾತನಾಡಿ, ತಂಡಕ್ಕೂ ತಮಗೂ‌ ಇರುವ ಸಂಬಂಧವನ್ನು ಬಿಡಿಸಿಟ್ಟರು. “ಸಿನಿಮಾ ಪ್ರೇಮಿಯಾಗಿ ಸ್ನೇಹಿತನಾಗಿದ್ದ ಚೈತನ್ಯ ಅವರೊಂದಿಗೆ ಸೇರಿ ಸಿನಿಮಾ‌ ನಿರ್ಮಿಸಲೆಂದು ‘ಯುನೈಟೆಡ್’ ಬ್ಯಾನರ್ ರಿಜಿಸ್ಟರ್ ಮಾಡಿದ್ದೆವು. ಆದರೆ ಸಿನಿಮಾಗಿಂತ ಚಂದನ್ ಶೆಟ್ಟಿಯಂಥ ಪ್ರತಿಭಾವಂತನಿಂದ ಹಾಡು ತರುವ ಯೋಜನೆ ಹಾಕಿದೆವು. ಚಂದನ್ ಅವರನ್ನು ಸೇರಿಸಿಕೊಂಡು ‘ಯುನೈಟೆಡ್‌ ಆಡಿಯೋ’ ಸಂಸ್ಥೆಯನ್ನು ಶುರು ಮಾಡಿದ್ದೇವೆ. ಚಿತ್ರದ ಕೊರಿಯೋಗ್ರಫರ್ ಭಜರಂಗಿ ಮೋಹನ್ ಅವರು ಚಿತ್ರೀಕರಣದ ನಡುವೆ ತಮ್ಮ ತಂದೆಯನ್ನು ಕಳೆದುಕೊಂಡರು. ಆದರೆ ನಮಗೆ ಶೂಟ್ ಪೂರ್ತಿಮಾಡಿಕೊಟ್ಟಿದ್ದಾರೆ. ಮೂರು ದಿನಗಳ ಕಾಲ ಶೆರಟನ್ ಹೋಟೆಲಲ್ಲಿ‌ ಚಿತ್ರೀಕರಣ ಮಾಡಲಾಯಿತು. ನಿರ್ಮಾಪಕರನ್ನು ಪರಿಚಯಿಸಿ ಜೊತೆಗಿದ್ದ ನನಗೂ ಹಾಡಲ್ಲಿ ಒಂದು ರೋಲ್ ಕೊಟ್ಟಿದ್ದಾರೆ” ಎಂದರು. ಆಲ್ಬಮ್ ನಿರ್ಮಾಪಕ ಚೈತನ್ಯ ಲಕಮ್ಸನಿಯವರು ಮಾಧ್ಯಮಗೋಷ್ಠಿಯಲ್ಲಿ ಹಾಜರಿದ್ದರು.

Exit mobile version