ಚಂದು ಶೋಭಿತಾ ಜೋಡಿಯ `ಜಾಕ್ ಪಾಟ್’

ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಚಂದುಗೌಡ ಸಿನಿಮಾ ನಟರಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ. ಆ ನಿಟ್ಟಿನಲ್ಲಿ ಅವರು ನಾಯಕರಾಗಿರುವ ಹೊಸ ಚಿತ್ರ ಜಾಕ್ ಪಾಟ್‌ ಚಿತ್ರದಲ್ಲಿ ಶೋಭಿತಾ ಶಿವಣ್ಣ ನಾಯಕಿ. ಈ ಜೋಡಿ ಈ ಹಿಂದೆಯೂ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡಿತ್ತು. ಒಟ್ಟಿನಲ್ಲಿ ಧಾರಾವಾಹಿಗಳ ಮೂಲಕ ನಾಡಿನಲ್ಲಿ ಹೆಸರು ಮಾಡಿರುವ ಚಂದು ಮತ್ತು ಶೋಭಿತಾ ತಮಗೆ ಸಿನಿಮಾದಲ್ಲಿ ಹೊಡೆದಿರುವ ಜಾಕ್ ಪಾಟ್ ಬಗ್ಗೆ ಚಿತ್ರತಂಡದೊಂದಿಗೆ ಮಾಹಿತಿ ನೀಡಿದ್ದಾರೆ. ಪ್ರೇಮಾರ್ಪಿತ ಪ್ರೊಡಕ್ಷನ್ ಅರ್ಪಿಸುವ ಚೆನ್ನರಾಯಪಟ್ಟಣದ ನವೀನ್ ನಿರ್ಮಿಸುತ್ತಿರುವ ಚಿತ್ರ ಇದು. ಈ ಹಿಂದೆಮಂದಸ್ಮಿತ’ ಎನ್ನುವ ಕಿರುಚಿತ್ರವನ್ನು ನಿರ್ಮಿಸಿ ನಟಿಸಿದ ಅನುಭ ಹೊಂದಿರುವ ನವೀನ್ ಚಿತ್ರದ ಬಗ್ಗೆ ಮಾತನಾಡಿದ್ದು ಹೀಗೆ. ‘ಅಟೆಂಪ್ಟ್ ಟು ಮರ್ಡರ್’ ಚಿತ್ರ ಮಾಡುವ ಹೊತ್ತಲ್ಲಿ ನಿರ್ದೇಶಕ ಅಮರ್ ನನಗೆ ಆತ್ಮೀಯರಾದರು. ಅವರಿಂದಾಗಿಯೇ ಈ ಚಿತ್ರ ನಿರ್ಮಾಣಕ್ಕೆ ಮುಂದಾದೆ. ಒಂದು ರೀತಿಯಲ್ಲಿ ಈ ಚಿತ್ರದಲ್ಲಿ ಭಾಗಿಯಾಗಿರುವ ಎಲ್ಲರೂ ನಿರ್ಮಾಪಕರೇ. ಯಾಕೆಂದರೆ ಇವರೆಲ್ಲರೂ ತಮ್ಮ ಪ್ರತಿಭೆ ಮತ್ತು ಸಮಯವನ್ನು ಚಿತ್ರಕ್ಕಾಗಿ ಧಾರೆ ಎರೆದಿದ್ದಾರೆ. ಹಾಗಾಗಿ ನಿರ್ಮಾಣ ಕಾರ್ಯ ಎನ್ನುವುದು ಎಲ್ಲರಿಂದಲೂ ಆಗಿದೆ. ನನ್ನ ಪಾಲಿಗೆ ನಿರ್ದೇಶಕ ಅಮರ್ ಅವರೇ ಮುಖ್ಯ ನಿರ್ಮಾಪಕರು” ಎಂದರು. ಮಾತ್ರವಲ್ಲ, “ಜಾಕ್‌ ಪಾಟ್‌ ಶುರು ಮಾಡಿದ ಮೇಲೆ ನನ್ನ ಜೀವನದಲ್ಲಿ ಜಾಕ್ ಪಾಟ್ ಹೊಡೆದಂತೆ ಆಗಿದೆ. ಚಿತ್ರ ಬಿಡುಗಡೆಯ ಬಳಿಕ ನಿಜವಾದ ಜಾಕ್‌ಪಾಟ್ ಹೊಡೆಯಬಹುದೆಂದು ನಿರೀಕ್ಷೆ ಮಾಡುತ್ತೇನೆ” ಎಂದು ಆಶಾಭಾವ ವ್ಯಕ್ತಪಡಿಸಿದರು.
ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ಚಂದು ಗೌಡ ತಮ್ಮದು ಪೊಲೀಸ್ ಅಧಿಕಾರಿಯ ಪಾತ್ರ ಎಂದರು. “ಚಿತ್ರದಲ್ಲಿಯೂ ನನ್ನ ಹೆಸರು ಚಂದು. ಅದು ನನಗೆ ಖಷಿ ನೀಡಿರುವ ವಿಚಾರ. ನಿರ್ದೇಶಕ ಅಮರ್ ತುಂಬ ಕ್ರಿಯೇಟಿವ್ ವ್ಯಕ್ತಿ. ಅದೇ ರೀತಿ ಹೊಸಬರ ಮೇಲೆ ಬಂಡವಾಳ ಹಾಕಿರುವ ನಿರ್ಮಾಪಕ ನವೀನ್ ಅವರಿಗೂ ತ್ಯಾಂಕ್ಸ್ ಹೇಳಲೇಬೇಕು.
ಆದರೆ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಹೊಂದಿರುವ ಈ ಸ್ಕ್ರಿಪ್ಟ್ ತುಂಬ ಶಕ್ತಿಶಾಲಿಯಾಗಿದೆ. ಬೆಂಗಳೂರಿನಲ್ಲಿ ಪತ್ತೆಯಾಗುವ ಮಾದಕ ವಸ್ತುವಿನ ಬಗ್ಗೆ ತನಿಖೆ ಮಾಡುವ ಪೊಲೀಸ್ ಅಧಿಕಾರಿಯಾಗಿ ನನ್ನ ಪಾತ್ರವಿದೆ. ಚಿತ್ರದಲ್ಲಿ ಅಶ್ವಿನ್ ಇನ್ನೊಂದು ಪ್ರಧಾನ ಪಾತ್ರ ಇದೆ. ಚಿತ್ರದ ಕೊನೆಗೆ ಯಾರಿಗೆ ಜಾಕ್‌ಪಾಟ್‌ ಹೊಡೆಯುತ್ತೆ ಎನ್ನುವುದೇ ಕತೆಯ ಹೂರಣ. ಹಾಡು ಸೇರಿದಂತೆ ಸುಮಾರು 45ದಿನಗಳ ಕಾಲ ಚಿತ್ರೀಕರಣ ನಡೆದಿದೆ. ರವಿದೇವ್ ಸಂಗೀತದಲ್ಲಿ ಮೂರು ಹಾಡುಗಳಿವೆ. ಸಂಜಿತ್ ಹೆಗ್ಡೆ, ನವೀನ್ ಸಜ್ಜು, ಸಂಗೀತಾ ಮೊದಲಾದವರು ಹಾಡಿದ್ದಾರೆ. ಒಂದು ಹಾಡನ್ನು ಬರೇ ಸಿ.ಜಿನಲ್ಲಿ ಮಾಡಿದ್ದೇವೆ. ಚಿತ್ರದಲ್ಲಿ ಫೈಟ್ಸ್ ಕೂಡ ಇದೆ” ಎಂದರು. ನಾಯಕಿ ಶೋಭಿತಾ ಜೊತೆಗೆ ಇದು ಎರಡನೇ ಚಿತ್ರ. ಈ ಹಿಂದೆ ಅವರೊಂದಿಗೆ ನಟಿಸಿರುವ ಕಾರಣ ಈ ಬಾರಿ ತುಂಬ ಕಂಫರ್ಟೆಬಲ್ ಆಗಿತ್ತು ಎಂದರು.
ನಾಯಕಿಯಾಗಿ ನಟಿಸುತ್ತಿರುವ ಶೋಭಿತಾ ಶಿವಣ್ಣ ಮಾತನಾಡಿ, “ಚಿತ್ರದಲ್ಲಿ ನನ್ನ ಹೆಸರು ಮೀರಾ. ನನಗೆ ಈ ಸಿನಿಮಾ ನಟನೆಯ ವಿಚಾರದಲ್ಲಿ ಹಿಂದಿನ ಸಿನಿಮಾಗಳಿಗಿಂತ ವಿಭಿನ್ನವಾಗಿತ್ತು. ಯಾಕೆಂದರೆ ನಿರ್ದೇಶಕರು ನನಗೆ “ಧಾರಾವಾಹಿಯಂತೆ ಓವರ್ ಆಕ್ಟಿಂಗ್ ಮಾಡಬೇಡಿ” ಎಂದು ಹೇಳಿ ಪ್ರತಿ ದೃಶ್ಯಕ್ಕೂ ಹೇಗೆ ನಟಿಸಬೇಕು ಎಂದು ತಿಳಿಸುತ್ತಿದ್ದರು. ಚಿತ್ರದಲ್ಲಿ ಚಂದು ಪತ್ನಿಯಾಗಿ ಕಾಣಿಸಿಕೊಂಡಿದ್ದೇನೆ. ನನ್ನ ತಂದೆಯಾಗಿ ನಾಗಾಭರಣ ಅವರು ನಟಿಸಿದ್ದಾರೆ. ಅವರು ಧಾರಾವಾಹಿಯಲ್ಲಿ ನನಗೆ ಮಾವನಾಗಿ ನಟಿಸಿದ್ದರು. ಅವರಂಥ ಹಿರಿಯರೊಂದಿಗೆ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ತುಂಬ ಖುಷಿಯಾಗಿದೆ. ನಟನೆಯ ಬಗ್ಗೆ ಮಾತ್ರ ಅಲ್ಲ, ಕಲಾವಿದೆಯಾಗಿ ಹೇಗೆ ಇರಬೇಕು ಎನ್ನುವುದನ್ನು ಕೂಡ ಅವರಿಂದ ಸಲಹೆ ಪಡೆದುಕೊಂಡಿದ್ದೇನೆ ಎಂದರು.
ಸಂಗೀತ ನಿರ್ದೇಶಕ ರವಿದೇವ್ ಅವರು ತಾವು ಈ ಹಿಂದೆ `ಅಟೆಂಪ್ಟ್ ಟು ಮರ್ಡರ್’ ಚಿತ್ರ ಮಾಡಿದ್ದನ್ನು ನೆನಪಿಸಿಕೊಂಡರು. ಚಿತ್ರದ ಛಾಯಾಗ್ರಾಹಕ ಅಭಿನಂದನ್ ಶೆಟ್ಟಿ, ಮೊದಲ ಬಾರಿ ನಟಿಸುತ್ತಿರುವ ಕುಶಾಂತ್ ಮೊದಲದವರು ಮಾಧ್ಯಮಗೋಷ್ಠಿಯಲ್ಲಿ ಭಾಗಿಯಾಗಿದ್ದರು.

Exit mobile version