ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಕಾಲಿಟ್ಟ ಚೀನಾ ಸೇನೆ

ನವದೆಹಲಿ: ಪೂರ್ವ ಲಡಾಖ್​​ನ ವಾಸ್ತವ ನಿಯಂತ್ರಣಾ ಗಡಿ ರೇಖೆ ಬಳಿ ಚೀನಾ ತನ್ನ ಸೇನಾಬಲವನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಕಳೆದ ಏಪ್ರಿಲ್​-ಮೇ ತಿಂಗಳಿಂದಲೂ ಇಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಿರಂತರವಾಗಿ ಸಂಘರ್ಷ ಆಗುತ್ತಲೇ ಬರುತ್ತಿದ್ದು, ಇತ್ತೀಚೆಗೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎಂದುಕೊಳ್ಳಲಾಗಿತ್ತು. ಆದರೆ ಚೀನಾ ಇಲ್ಲಿ ನಿರಂತರವಾಗಿ ತನ್ನ ಮಿಲಿಟರಿ ಬಲವನ್ನು ಹೆಚ್ಚಿಸುತ್ತಲೇ ಇದೆ. ವಾಯುನೆಲೆಗಳನ್ನು ವರ್ಧಿಸುತ್ತಿದೆ ಅಷ್ಟೇ ಅಲ್ಲ, ವಾಯು ರಕ್ಷಣಾ ಘಟಕಗಳನ್ನು ನಿರ್ಮಾಣ ಮಾಡುತ್ತಿದೆ. ಹೊಸ ವಾಯುನೆಲೆಗಳನ್ನು ಕಟ್ಟುವ ಜತೆ ಹೆಲಿಕಾಪ್ಟರ್​​ ಹಾರಾಟ ವ್ಯಾಪ್ತಿಯನ್ನು ಹೆಚ್ಚಿಸುವತ್ತ ಗಮನಕೊಟ್ಟಿದೆ. ರನ್​ವೇಗಳೂ ಸಿದ್ಧವಾಗುತ್ತಿವೆ. ಕಳೆದ ಒಂದು ವರ್ಷಗಳಿಂದಲೂ ಚೀನಾ ಇದೇ ಕೆಲಸ ನಡೆಸುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಹಾಗಂತ ಭಾರತೀಯ ಸೇನೆಯೂ ಸಹ ಸುಮ್ಮನೆ ಕುಳಿತಿಲ್ಲ. ಕಳೆದ ವರ್ಷದ ಸಂಘರ್ಷದ ಬಳಿಕ ಗಡಿಭಾಗದಲ್ಲಿ ಭಾರತ ಕೂಡ ಸೇನಾ ಬಲವನ್ನು ಹೆಚ್ಚಿಸಿದೆ. ಯುದ್ಧ ಟ್ಯಾಂಕ್​​ಗಳನ್ನು ಶಸ್ತ್ರಾಸ್ತ್ರಗಳ ವಾಹನಗಳನ್ನೂ ನಿಯೋಜಿಸಿ, ಚೀನಾ ಸೈನಿಕರಿಗೆ ಕೌಂಟರ್​ ಕೊಟ್ಟಿದೆ.

ಆದರೆ ಕುತಂತ್ರಿ ಚೀನಾ ತನ್ನ ಕಾರ್ಯಚಟುವಟಿಕೆಗಳನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೂ ವಿಸ್ತರಿಸಿದೆ. ಕಳೆದ ಕೆಲವು ತಿಂಗಳಿಂದಲೂ ಚೀನಾ ಮತ್ತು ಪಾಕಿಸ್ತಾನ ಸೈನಿಕರ ನಡುವೆ ಸಹಕಾರ ಹೆಚ್ಚಿದೆ. ಇವೆರಡೂ ದೇಶಗಳು ಸೇರಿ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಮಿಲಿಟರಿ ಮೂಲಸೌಕರ್ಯಗಳನ್ನು ಹೆಚ್ಚಿಸಲು ಪ್ರಯತ್ನ ಮಾಡುತ್ತಿವೆ. ಭೂ ಮೇಲ್ಮೈನಿಂದ, ಗಾಳಿಯಲ್ಲಿ ಹಾರಾಡುತ್ತಿರುವ ಯುದ್ಧ ವಿಮಾನಗಳನ್ನು ಧ್ವಂಸಗೊಳಿಸುವ ಕ್ಷಿಪಣಿ ವ್ಯವಸ್ಥೆಯನ್ನು ರೂಪಿಸಲು ಮುಂದಾಗಿವೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

Exit mobile version