ಸರ್ಕಾರದ ನಿರ್ಧಾರಕ್ಕೆ ಸಿನಿ ಸ್ಟಾರ್‌ಗಳ ಆಕ್ಷೇಪ; ಸರ್ಕಾರದ ನಿರ್ಧಾರ ಗೌರವಿಸುವುದು ನಮ್ಮ ಕರ್ತವ್ಯ ಎಂದ ಸುದೀಪ್

ಬೆಂಗಳೂರು, ಎ. 03: ಕೋವಿಡ್‌–19 ನಿಯಂತ್ರಣಕ್ಕಾಗಿ ರಾಜ್ಯದ 8 ಜಿಲ್ಲೆಗಳ ಥಿಯೇಟರ್‌ಗಳಲ್ಲಿ ಶೇ. 50 ಸೀಟು ಭರ್ತಿಗಷ್ಟೇ ಅವಕಾಶ ನೀಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹಲವು ನಟರು ಹಾಗೂ ನಿರ್ದೇಶಕರು ತೀವ್ರ ಆಕ್ಷೇಪ ವ್ಯಕ್ತಪ‍ಡಿಸಿದ್ದಾರೆ.

ಸರ್ಕಾರದ ಈ‌ ನಿರ್ಧಾರದ ಬಗ್ಗೆ ನಟ‌ ಕಿಚ್ಚ ಸುದೀಪ್ ಸೇರಿದಂತೆ ‌ಅನೇಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಸುದೀಪ್, ಈಗಷ್ಟೇ ಬಿಡುಗಡೆಯಾಗಿರುವ ಚಿತ್ರಗಳಿಗೆ ಸರ್ಕಾರದ ಈ ನಿರ್ಧಾರವು ಆಘಾತ ತಂದಿದೆ. ಈ ನಿರ್ಧಾರದ ಹಿಂದೆ ಸೂಕ್ತವಾದ ಕಾರಣವಿರುವುದರಿಂದಾಗಿ, ಇದನ್ನು ಗೌರವಿಸುವುದೂ ನಮ್ಮ ಕರ್ತವ್ಯ. ಈ ಪರಿಸ್ಥಿತಿಯಲ್ಲೂ ಗೆದ್ದುಬರುವ ಶಕ್ತಿಯು ಯುವರತ್ನ ಚಿತ್ರತಂಡಕ್ಕೆ ಸಿಗಲಿ ಎಂದು ಆಶಿಸುತ್ತೇನೆ’ ಎಂದಿದ್ದಾರೆ.

ಇನ್ನೂ ಇದೇ ವಿಷಯದ ಕುರಿತು ಟ್ವೀಟ್ ಮಾಡಿರುವ ನಟ ರಕ್ಷಿತ್ ಶೆಟ್ಟಿ, ಕನ್ನಡ ಚಿತ್ರರಂಗ ಉಳಿಯುವ ನಿಟ್ಟಿನಲ್ಲಿ ಚಿತ್ರಮಂದಿರಗಳಲ್ಲಿ 100% ಅನುಮತಿಯನ್ನು ಕೊಡಬೇಕು ಎಂದು ರಾಜ್ಯ ಸರ್ಕಾರದಲ್ಲಿ ವಿನಮ್ರ ಮನವಿ ಮಾಡಿದ್ದಾರೆ.

ಅಲ್ಲದೇ, 1 ವರ್ಷದ ನಂತರ ಚೇತರಿಸಿಕೊಳ್ಳುತ್ತಿದ್ದ ಚಿತ್ರರಂಗಕ್ಕೆ ಶೇ.50 ರಷ್ಟು ಕಡಿತ ಮಾರಕವಾಗುತ್ತದೆ. ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಸಂಪೂರ್ಣ ಸಾಮರ್ಥ್ಯದಲ್ಲಿ ಚಿತ್ರಮಂದಿರಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕಾಗಿ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ವಿನಂತಿ ಮಾಡಿಕೊಂಡಿದ್ದಾರೆ.

ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ಪ್ರತಿಕ್ರಿಯಿಸಿ, ಪ್ರೇಕ್ಷಕರ ಸಂಖ್ಯೆ 50% ಬದಲು 80% ಮಾಡಿ. ಚಿತ್ರೋದ್ಯಮ ಉಳಿಸಿ. ನಿರ್ಮಾಪಕರು ಉಳಿದರೆ ಮಾತ್ರ ತಂತ್ರಜ್ಞರು ಕಾರ್ಮಿಕರು ಉಳಿಯುವುದು. ನಮ್ಮನ್ನು ಉಳಿಸಿ. ಕೊರೋನದಿಂದ ಸಾಯಬಹುದು. ಹಸಿವು ಮತ್ತು ಅಸಹಾಯಕತೆಯಿಂದಲ್ಲ ಎಂದಿದ್ದಾರೆ. ‌

ಇದಲ್ಲದೇ ನಟ ಡಾಲಿ ಧನಂಜಯ್, ನಿರ್ದೇಶಕ ದಿನಕರ್ ತೂಗುದೀಪ್ ಸೇರಿದಂತೆ ಅನೇಕ ನಟ-ನಟಿಯರು, ನಿರ್ದೇಶಕರು ಮತ್ತು ನಿರ್ಮಾಪಕರು ಸಹ ಚಿತ್ರಮಂದಿರಗಳಲ್ಲಿ ಶೇ.50 ಆಸನ ಭರ್ತಿಗೆ ನಿರ್ಬಂಧ ವಿಧಿಸಿರುವ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Exit mobile version