ಫೇಕ್ ಫ್ಯಾಕ್ಟರಿಯನ್ನು ಕಾನೂನಿನ ಮೂಲಕ ಕಿತ್ತೆಸೆಯುತ್ತೇವೆ – ಸಿಎಂ ಸಿದ್ದರಾಮಯ್ಯ ಘೋಷಣೆ

ಸುಳ್ಳು ಸುದ್ದಿಗಳನ್ನು ನಂಬಿ ಶೇರ್ ಮಾಡುವ ಮುನ್ನ ಎಚ್ಚರಿಕೆ ವಹಿಸಿ….!! ಸುಳ್ಳು ಸುದ್ದಿಯ ಸೃಷ್ಟಿಕರ್ತರು, ಅವರ ಬೆನ್ನ ಹಿಂದೆ ಬೆಂಬಲಕ್ಕೆ ನಿಂತಿರುವವರು ಹೀಗೆ ಫೇಕ್ ಫ್ಯಾಕ್ಟರಿಯನ್ನು (Fake Factory) ಕಾನೂನಿನ ಮೂಲಕ ಬೇರು ಸಹಿತ ಕಿತ್ತೆಸೆಯುತ್ತೇವೆ ಎಂದು ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಸುಳ್ಳು ಸುದ್ದಿ ಹರಡುತ್ತಿದೆ ಎಂದು ಆರೋಪಿಸಿ ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ – ಜೆಡಿಎಸ್ (BJP-JDS) ಮಿತ್ರಮಂಡಳಿ ಕೃಪಾಪೋಷಿತ ಕಿಡಿಗೇಡಿಗಳು ವಾರ್ತಾಪತ್ರಿಕೆಯನ್ನು ಹೋಲುವ ಸುಳ್ಳು ಸುದ್ದಿಯ ತುಣುಕೊಂದನ್ನು ಸೃಷ್ಟಿಸಿ, ಅದರಲ್ಲಿ ಜನರ ಕೋಮುಭಾವನೆ ಕೆರಳಿಸುವ ಸುದ್ದಿಯನ್ನು ತುಂಬಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ಈಗಾಗಲೇ ನಾನು ಪೊಲೀಸ್ ಇಲಾಖೆಗೆ ದೂರು ನೀಡಿದ್ದೇನೆ.

ಇದರ ಹಿಂದಿರುವ ದುಷ್ಟ ಶಕ್ತಿ ಯಾರು ಎಂಬ ಬಗ್ಗೆ ನಮಗೆ ಮಾಹಿತಿ ಇದ್ದು, ಆದಷ್ಟು ಬೇಗನೆ ಅವರನ್ನು ನ್ಯಾಯದ ಕೈಗಳಿಗೆ ಒಪ್ಪಿಸಲಾಗುವುದು. ರಾಜಕೀಯ ವಿರೋಧಿಗಳನ್ನು ನ್ಯಾಯಸಮ್ಮತ ರೀತಿಯಲ್ಲಿ ಎದುರಿಸಲಾಗದೆ ಇಂತಹ ಅಡ್ಡದಾರಿ ಮೂಲಕ ಚುನಾವಣೆ ಗೆಲ್ಲಲು ಹೊರಟಿರುವುದು ಬಿಜೆಪಿ ಮತ್ತು ಜೆಡಿಎಸ್ನ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ.

ಹತ್ತು ವರ್ಷಗಳ ಕಾಲ ದೇಶದ ಆಡಳಿತ ನಡೆಸಿದ ಪಕ್ಷವೊಂದು ಚುನಾವಣೆ ಗೆಲ್ಲಲು ಸುಳ್ಳು ಸುದ್ದಿಯ ಮೊರೆ ಹೋಗುವಂತಹ ಹೀನಾಯ ಸ್ಥಿತಿಗೆ ತಲುಪಬಾರದಿತ್ತು ಎಂದು ಟೀಕಿಸಿದ್ದಾರೆ. ವಾರ್ತಾಪತ್ರಿಕೆಯನ್ನೇ ಹೋಲುವ ನಕಲಿ ಸುದ್ದಿ ತುಣುಕೊಂದನ್ನು ಸೃಷ್ಟಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿಬಿಟ್ಟ ಕುಕೃತ್ಯದಲ್ಲಿ ಭಾಗಿಯಾದ ಪ್ರಭಾಕರ್ ರೆಡ್ಡಿ, ವಸಂತ ಗಿಳಿಯಾರ್ (Vasanta Giliyaar), ವಿಜಯ್ ಹೆರಗು ಮುಂತಾದ ಕಿಡಿಗೇಡಿಗಳ ವಿರುದ್ಧ ದೂರು ದಾಖಲಾಗಿದೆ. ಫೇಕ್ ನ್ಯೂಸ್ಗಳ ಸೃಷ್ಟಿ ಮತ್ತು ಹರಡುವಿಕೆಯನ್ನು ನಮ್ಮ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.

ಯಾರೂ ಕೂಡ ಅಂತಹ ಕಾನೂನುಬಾಹಿರ ಕೃತ್ಯಕ್ಕೆ ಕೈಹಾಕಬಾರದು ಎಂದು ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದ್ದೆವು. ಆದರೂ ನನ್ನ ವಿರುದ್ಧವೇ ಸುಳ್ಳು ಸುದ್ದಿ ಸೃಷ್ಟಿಸಿ, ಜನರ ದಾರಿ ತಪ್ಪಿಸಲು ಯತ್ನಿಸಿದ್ದಾರೆ. ಕಾನೂನಿನ ಮೂಲಕ ಈ ಪ್ರಕರಣವನ್ನು ತಾರ್ಕಿಕ ಅತ್ಯಂಕ್ಕೆ ಕೊಂಡೊಯ್ಯುತ್ತೇವೆ ಎಂದು ಹೇಳಿದ್ದಾರೆ.

Exit mobile version