ಸಾಮಾನ್ಯ ಪರಿಜ್ಞಾನ ಇರುವ ಯಾರೊಬ್ಬರೂ ಇಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ: ಡಿ.ಕೆ ಶಿವಕುಮಾರ್

ಬೆಂಗಳೂರು, ಡಿ. 25: ರಾತ್ರಿ ಕರ್ಫ್ಯೂ ವಿಚಾರ ಯಡಿಯೂರಪ್ಪ ಅವರದಲ್ಲ. ಸುಧಾಕರ್ ಅವರದು. ಸಾಮಾನ್ಯ ಪರಿಜ್ಞಾನ ಇರುವ ಯಾರೊಬ್ಬರೂ ಇಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಪ್ರಪಂಚ ನಮ್ಮ ರಾಜ್ಯ ಹಾಗೂ ಈ ನಗರವನ್ನು ಗಮನಿಸುತ್ತಿದೆ. ಹಗಲಲ್ಲಿ ಸೋಂಕು ಬರಲ್ಲ, ರಾತ್ರಿ ವೇಳೆ ಸೋಂಕು ಬರುತ್ತದೆಯೇ? ಪರಿಜ್ಞಾನ ಇರುವವರು ಯಾರೂ ಇಂತಹ ನಿರ್ಧಾರಕ್ಕೆ ಬರುವುದಿಲ್ಲ. ರಾತ್ರಿ 11 ಗಂಟೆ ಮೇಲೆ ಯಾರು ಓಡಾಡುತ್ತಾರೆ?

ಇಡೀ ವರ್ಷ ಜನ ನರಳಿದ್ದಾರೆ. ಇವರು ಯಾರ ಅಭಿಪ್ರಾಯ ಪಡೆಯದೆ ಏಕಾಏಕಿ ನಿರ್ಧಾರ ತೆಗೆದುಕೊಂಡಿದ್ದು ಯಾಕೆ? ಇವರಿಗೆ ಯಾರಾದರೂ ತಜ್ಞರು ರಾತ್ರಿ ವೇಳೆ ಕರ್ಫ್ಯೂ ಮಾಡಿದರೆ ಸೋಂಕು ಬರುವುದಿಲ್ಲ ಎಂದು ಸಲಹೆ ನೀಡಿದ್ದಾರಾ? ಆ ರೀತಿ ಯಾರಾದರೂ ಕೊಟ್ಟಿದ್ದರೆ ಅವರ ಫೋಟೋ ಇದ್ದರೆ ಕೊಡಿ. ಅವರದು, ಇವರ ಫೋಟೋನಾ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ.

ಇದು ಸಾಮಾನ್ಯ ಜ್ಞಾನದ ವಿಚಾರ. ಇದರಲ್ಲಿ ಯಾವುದೇ ವಿಜ್ಞಾನ ಅಡಗಿಲ್ಲ. ರಸ್ತೆ, ಮಾರುಕಟ್ಟೆ ಸೇರಿದಂತೆ ಹಗಲೆಲ್ಲಾ ಜನ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಎಲ್ಲೆಲ್ಲಿ ಯಾವ ರೀತಿ ನಿಯಂತ್ರಣ ಮಾಡಬೇಕೋ ಆ ರೀತಿ ಕ್ರಮ ಕೈಗೊಳ್ಳಬೇಕು. ಸರ್ಕಾರ ಜನರಿಗೆ ಔಷಧಿ ಒದಗಿಸಬೇಕು. ಅವರಿಗೆ ಅಗತ್ಯ ಸೌಲಭ್ಯ ಒದಗಿಸಿಕೊಡಬೇಕು. ನೊಂದವರಿಗೆ, ನಷ್ಟ ಅನುಭವಿಸಿರುವವರಿಗೆ ಪರಿಹಾರ ನೀಡಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುವವರಿಗೆ ತೆರಿಗೆ ವಿನಾಯಿತಿ ಏನಾದರೂ ಕೊಟ್ಟಿದ್ದಾರಾ? ಉದ್ಯೋಗ ಭತ್ಯೆ ನೀಡಿದ್ದಾರಾ? ಬ್ಯಾಂಕ್ ಗಳಿಗೆ ಸೂಚನೆ ನೀಡಿ ಸಾಲ ಮನ್ನಾ ಮಾಡದಿದ್ದರೂ ಬಡ್ಡಿ ಮನ್ನಾ ಮಾಡಿದ್ದಾರಾ? ಅರ್ಧಕ್ಕರ್ಧ ರೆಸ್ಟೋರೆಂಟ್ ಗಳು ಬಾಗಿಲು ತೆರೆಯಲು ಆಗಿಲ್ಲ.

ತಮಗೆ ಪ್ರಚಾರ ಸಿಗುತ್ತದೆ ಅಂತಾ ಅವರಿಗೆ ಇಷ್ಟಬಂದ ಹಾಗೆ ತೀರ್ಮಾನ ಮಾಡಿದರೆ ಕೇಳಲು ಸಾಧ್ಯವೇ? ಈ ಸರ್ಕಾರ ಬಂದ ಮೇಲೆ ಎಷ್ಟು ನಿರ್ಧಾರಗಳಲ್ಲಿ ಯೂ ಟರ್ನ್ ಹೊಡೆದಿದೆ ಎಂದು ಲೆಕ್ಕ ಹಾಕಿ. ಸರ್ಕಾರ ಯುವಕರ ಭಾವನೆ ಮತ್ತು ಆಕ್ರೋಶಕ್ಕೆ ಸ್ಪಂದಿಸಿದೆ. ನಾವು ಕೂಡ ಅವರ ಭಾವನೆಗೆ ಸ್ಪಂದಿಸಿದ್ದು, ಅದು ನಮ್ಮ ಕರ್ತವ್ಯ.

ನಮ್ಮ ಯುವಕರಿಗೆ ಈ ಸಚಿವರಿಗಿಂತ ಉತ್ತಮ ಪರಿಜ್ಞಾನ ಇದೆ. ಈ ರಾಜ್ಯದ ಜನರಿಂದ ನಮ್ಮ ರಾಜ್ಯಕ್ಕೆ ಹೆಸರು ಬಂದಿದೆಯೇ ಹೊರತು ಇವರಿಂದ ಅಲ್ಲ.

ಯಡಿಯೂರಪ್ಪನವರು ಬೇಲ್ ಮೇಲೆ ಬಂದಿದ್ದನ್ನು ನೋಡಿದ್ದೇವೆ, ದೊಡ್ಡ ನಾಯಕರು ಬಂದಿದ್ದನ್ನು ನೋಡಿದ್ದೇವೆ. ಇದಕ್ಕೆಲ್ಲ ಕಾಲ ಉತ್ತರ ಕೊಡುತ್ತದೆ. ರಾಜ್ಯದಿಂದ ಈ ಮಾಹಾಮಾರಿ ತೊಲಗಿ, ಜನರಿಗೆ ನೆಮ್ಮದಿ ಶಾಂತಿ ಸಿಗಲಿ ಎಂದು ನಾನು ವೈಕುಂಠ ಏಕಾದಶಿ ದಿನ ದೇವರಲ್ಲಿ ಪ್ರಾರ್ಥಿಸುತ್ತೇನೆ.

Exit mobile version