ತಾವೊಬ್ಬರೇ ಶ್ರೇಷ್ಠರು ಎಂದು ಕರೆಸಿಕೊಳ್ಳುವವರು ಬಹಳ ಪುಕ್ಕಲರಾಗಿರುತ್ತಾರೆ – ಸಿಎಂ ಸಿದ್ದರಾಮಯ್ಯ

Mysore: ತಾವೊಬ್ಬರೇ ಶ್ರೇಷ್ಠರು ಎಂದು ಕರೆಸಿಕೊಳ್ಳುವವರು ಬಹಳ ಪುಕ್ಕಲರಾಗಿರುತ್ತಾರೆ. ಶ್ರೇಷ್ಠತೆಯ ವ್ಯಸನ ಹೊಂದಿದ್ದ ಹಿಟ್ಲರ್ ಲಕ್ಷಾಂತರ ಮನುಷ್ಯರ ಕೊಲೆಗೆ ಕಾರಣರಾದರು. ಪುಕ್ಕಲರು ಮಾತ್ರ ತಾವೊಬ್ಬರೇ ಶ್ರೇಷ್ಠರು ಎಂದು ಬಿಂಬಿಸಿಕೊಳ್ಳಲು ಒದ್ದಾಡುತ್ತಾರೆ. ನಾವುಗಳು ಬುದ್ಧ-ಬಸವ-ಕುವೆಂಪು (Buddha-Basava-Kuvempu) ಆಗಲು ಸಾಧ್ಯವಿಲ್ಲ. ಆದರೆ ಇವರ ಹಾದಿಯಲ್ಲಾದರೂ ನಡೆಯಬೇಕು. ಬಸವಣ್ಣರನ್ನು ಪೂಜಿಸುತ್ತಾ ಯಾವ ಜಾತಿ ಎಂದು ಜಾತಿವಾದ ಮಾಡುವುದು ತಪ್ಪು. ವಿದ್ಯಾವಂತರೇ ಹೆಚ್ವು ಜಾತಿವಾದಿಗಳಾಗುತ್ತಿರುವುದು ದುರಂತದ ಸಂಗತಿ. ಆದ್ದರಿಂದ ವೈಚಾರಿಕತೆ ಮತ್ತು ಮಾನವೀಯತೆ ಇರುವ ಶಿಕ್ಷಣ ವ್ಯವಸ್ಥೆ ರೂಪಿಸಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ನವರು ಅಭಿಪ್ರಾಯಪಟ್ಟಿದ್ದಾರೆ.

Siddaramaiah

ಮೈಸೂರಿನ (Mysore) ವಿಶ್ವಮೈತ್ರಿ ಬುದ್ಧ ವಿಹಾರವು ಆಯೋಜಿಸಿದ್ದ ವೈಶಾಖ ಬುದ್ಧಪೂರ್ಣಿಮ ಹಾಗೂ ಭಗವಾನ್ ಬುದ್ಧರ 2568ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ವ್ಯವಸ್ಥೆ, ವರ್ಣಾಶ್ರಮದಿಂದ ಮನುಷ್ಯ ಮನುಷ್ಯನನ್ನು ಶೋಷಿಸುವ ಅಸಮಾನತೆ ಸೃಷ್ಟಿಯಾಯಿತು. ಅಸಮಾನತೆ ಪೋಷಿಸುವ ಜಾತಿ ವ್ಯವಸ್ಥೆ ಅಳಿಸಲು ಬುದ್ಧ, ಬಸವ, ಅಂಬೇಡ್ಕರ್ (Ambedkar) ರೀತಿ ಹಲವು ಮಹನೀಯರು ಶ್ರಮಿಸಿದರು. ಅತ್ಯಂತ ಕಡು ಬಡವನಾದ ಮೇಲ್ಜಾತಿಯವರನ್ನು ನಾವು ಬುದ್ದಿ, ಸ್ವಾಮಿ ಅಂತ ಗೌರವಿಸುತ್ತೇವೆ.

ಅದೇ ಅನುಕೂಲಸ್ಥ ಕೆಳ ಜಾತಿಯವರನ್ನು ಏಕವಚನದಲ್ಲಿ ಅಗೌರವದಿಂದ ಕರೆಯುತ್ತೇವೆ. ಇದೇ ಗುಲಾಮಗಿರಿ ಮನಸ್ಥಿತಿ. ಈ ಮನಸ್ಥಿತಿಯನ್ನು ಅಳಿಸಲು ಬುದ್ಧ, ಬಸವ ಅಂಬೇಡ್ಕರ್ ಸೇರಿ ಹಲವರು ಶ್ರಮಿಸಿದರುಪಟ್ಟಭದ್ರ ಹಿತಾಸಕ್ತಿಗಳು ಬುದ್ದ, ಬಸವ, ಅಂಬೇಡ್ಕರ್, ಗಾಂಧಿ (Gandhi) ಕಾಲದಲ್ಲೂ ಇದ್ದರು, ಈಗಲೂ ಇದ್ದಾರೆ. ಇವರು ಸಮಾಜದ ಪ್ರಗತಿಯ ಶತ್ರುಗಳು. ಆದರೆ ನಮ್ಮ ಸಂವಿಧಾನ ಎಲ್ಲಾ ಜಾತಿ ಸಮುದಾಯಗಳಿಗೂ ಸಮಾನ ಅವಕಾಶ ಕಲ್ಪಿಸುತ್ತದೆ. ಆದ್ದರಿಂದ ಸಂವಿಧಾನ ಜ್ಞಾನ ಸರ್ವರಿಗೂ ಅಗತ್ಯ ಎಂದು ಹೇಳದರು.

ದೇವರು ಯಾರ ಹಣೆಯಲ್ಲೂ ತಾರತಮ್ಯ, ಬಡತನವನ್ನು ಬರೆಯುವುದಿಲ್ಲ. ಹೀಗೆ ಬರೆದವರನ್ನು ದೇವರು ಎಂದು ಜನ ಒಪ್ಪುವುದಿಲ್ಲ. ಅಂಬೇಡ್ಕರ್, ಬುದ್ಧ ಎಲ್ಲರೂ ಹಣೆಬರಹ ಎನ್ನುವ ಮೌಡ್ಯವನ್ನು ಅಳಿಸಿ ವೈಚಾರಿಕತೆ ಬೆಳೆಸಲು ಯತ್ನಿಸಿದರು. ಆದ್ದರಿಂದ ಅಂಬೇಡ್ಕರ್ ಅವರು ಮೌಡ್ಯವಿಲ್ಲದ ಬೌದ್ಧ ಧರ್ಮವನ್ನು ಸ್ವೀಕರಿಸಿದರು.ಜಾತಿ ವ್ಯವಸ್ಥೆ ನೀರಿನ ಬಾವಿಗೆ ಬಿದ್ದ ಕಸದಂತೆ. ಕೊಡದಲ್ಲಿ ನೀರು ಸೇದುವಾಗ ಕಸ ಪಕ್ಕಕ್ಕೆ ಸರಿಯುತ್ತದೆ. ನೀರು ಸೇದಿದ ಮೇಲೆ ಮತ್ತೆ ಕಸ ತುಂಬಿಕೊಳ್ಳುತ್ತದೆ.

ಆದ್ದರಿಂದ ಕಸವನ್ನೇ ನೀರಿನಿಂದ ತೆಗೆದು ಹೊರಗೆ ಹಾಕಿದರೆ ಜಾತಿ ವ್ಯವಸ್ಥೆ ಮತ್ತು ಅಸಮಾನತೆ ಹೋಗುತ್ತದೆ. ಈ ಅಸಮಾನತೆ ಅಳಿಸುವ ಉದ್ದೇಶದಿಂದಲೇ ನಾವು ಗ್ಯಾರಂಟಿ ಯೋಜನೆಗಳನ್ನು (Guarantee Scheme) ಜಾರಿ ಮಾಡಿದ್ದೇವೆ. ಆರ್ಥಿಕವಾಗಿ ಶಕ್ತಿ ಬಂದರೆ ಸ್ವಾಭಿಮಾನಿಗಳಾಗುತ್ತಾರೆ. ಮಹಿಳೆಯರಲ್ಲಿ, ಬಡವರಲ್ಲಿ ಆರ್ಥಿಕ ಶಕ್ತಿ ತುಂಬುವ ಮೂಲಕ ಅವರನ್ನು ಸ್ವಾಭಿಮಾನಿಗಳನ್ನಾಗಿ ಮಾಡುವ ಕಾರ್ಯ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

Exit mobile version