40% ಕಮಿಷನ್ ಆರೋಪ : ಗುತ್ತಿಗೆದಾರರ ಸಂಘದಿಂದ ವರದಿ ಕೇಳಿದ ಗೃಹ ಸಚಿವಾಲಯ

Bengaluru

ಬೆಂಗಳೂರು : ರಾಜ್ಯ ಸರ್ಕಾರದ(State Government) ವಿವಿಧ ಇಲಾಖೆಗಳಲ್ಲಿ ಕಮಿಷನ್(Commission) ಪಡೆಯಲಾಗುತ್ತಿದೆ. ಗುತ್ತಿಗೆ ಕಾಮಗಾರಿಗಳನ್ನು ನೀಡಲು 40% ಕಮಿಷನ್ ಪಡೆಯಲಾಗುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಹಿರಂಗವಾಗಿ ಆರೋಪಿಸಿದ್ದರು. ಈ ಆರೋಪ ರಾಜ್ಯ ರಾಜಕೀಯದಲ್ಲಿ ಕೋಲಾಹಲವನ್ನೇ ಎಬ್ಬಿಸಿತ್ತು. ಇದೀಗ ಈ ಆರೋಪದ ಕುರಿತು ವರದಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಕೆಂಪಣ್ಣ ಅವರಿಗೆ ಸೂಚನೆ ನೀಡಿದೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಿಗೆ ಕೇಂದ್ರ ಗೃಹ ಇಲಾಖೆಯಿಂದ ಕರೆ ಬಂದಿದೆ. ಬೆಂಗಳೂರಿನ ಕಚೇರಿಗೆ ಆಗಮಿಸಿ ಆರೋಪದ ಕುರಿತು ಸಮಗ್ರ ದಾಖಲೆಗಳನ್ನು ನೀಡುವಂತೆ ಸೂಚಿಸಲಾಗಿದೆ. ಹೀಗಾಗಿ ಸಚಿವರು, ಶಾಸಕರು, ಇಂಜಿನಿಯರ್‍ಗಳ ವಿರುದ್ಧ ದೂರು ನೀಡಲು ಗುತ್ತಿಗೆದಾರರ ಸಂಘ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದೆ. ದಾಖಲೆಗಳನ್ನು ತೆಗೆದುಕೊಂಡು ಗೃಹ ಸಚಿವಾಲಯ ತಿಳಿಸಿದ ದಿನದಂದು ಅವುಗಳನ್ನು ಕಳಿಸಿಕೊಡಲು ಗುತ್ತಿಗೆದಾರರ ಸಂಘವು ನಿರ್ಧರಿಸಿದೆ.

2021ರ ಜುಲೈ 7ರಂದು ಪ್ರಧಾನಿ ಸಚಿವಾಲಯಕ್ಕೆ 40% ಕಮಿಷನ್ ಕುರಿತು ರಾಜ್ಯ ಗುತ್ತಿಗೆದಾರರ ಸಂಘದಿಂದ ದೂರು ನೀಡಲಾಗಿತ್ತು. ಹೀಗಾಗಿ ಈ ಕುರಿತು ಸಮಗ್ರ ತನಿಖೆ ನಡೆಸಲು ಪ್ರಧಾನಿ ಕಚೇರಿಯಿಂದಲೇ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಇನ್ನು 40% ಕಮಿಷನ್ ಆರೋಪ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಈ ಆರೋಪ ಸರ್ಕಾರಕ್ಕೂ ಮುಜುಗರ ತಂದಿತ್ತು. ಕೆ.ಎಸ್ ಈಶ್ವರಪ್ಪ ವಿರುದ್ಧವೂ 40% ಕಮಿಷನ್ ಆರೋಪ ಕೇಳಿಬಂದಿತ್ತು.

ನಂತರ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೂ ಸುದ್ದಿಯಾಗಿತ್ತು. ಇದೀಗ ಕೇಂದ್ರ ಗೃಹ ಸಚಿವಾಲಯ ದಾಖಲೆ ನೀಡುವಂತೆ ಸೂಚಿಸಿರುವುದು ಕುತೂಹಲ ಮೂಡಿಸಿವೆ.

Exit mobile version