ಅಂಬೇಡ್ಕರ್ ಅಂತ್ಯಸಂಸ್ಕಾರ ಮಾಡಲು ಕಾಂಗ್ರೆಸ್ ಜಾಗ ಕೊಡಲಿಲ್ಲ: ನಳಿನ್ ಕುಮಾರ್‌ ಕಟೀಲ್ ಟೀಕೆ

ಚಿತ್ರದುರ್ಗ, ಜು. 24: ದಲಿತ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಸಿರಂ ಸಿದ್ದರಾಮಯ್ಯ ನಡುವಿನ ಜಟಾಪಟಿ ಮುಂದುವರಿದಿದೆ.

ದಲಿತ ಸಿಎಂ ವಿಚಾರವಾಗಿ ಚಿತ್ರದುರ್ಗದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ನಲ್ಲಿ ಇದುವರೆಗೆ ನಾಲ್ಕು ದಲಿತರು ಮುಖ‍್ಯಮಂತ್ರಿಯಾಗಿದ್ದಾರೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಬಿಜೆಪಿ ರಾಜ್ಯದಲ್ಲಿ ದಲಿತರನ್ನು ಮುಖ‍್ಯಮಂತ್ರಿ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಸವಾಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದರು.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅತೀ ಹೆಚ್ಚು ಅವಮಾನ ಮಾಡಿದ್ದೇ ಕಾಂಗ್ರೆಸ್. ಮೊದಲ ಸಚಿವ ಸಂಪುಟದಲ್ಲಿಯೇ ಅಂಬೇಡ್ಕರ್ ನೋವಿನಿಂದ ಹೊರ ಬರುವಂತೆ ಮಾಡಿದರು. ಲೋಕಸಭೆ ಚುನಾವಣೆಗೆ ಅಂಬೇಡ್ಕರ್ ನಿಂತಾಗ ಕಾಂಗ್ರೆಸ್ ಅವರನ್ನು ಸೋಲಿಸಿತು ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಅಂಬೇಡ್ಕರ್ ಅಂತ್ಯಸಂಸ್ಕಾರ ಮಾಡಲು ಕಾಂಗ್ರೆಸ್ ಜಾಗ ಕೊಡಲಿಲ್ಲ. ಅವರಿಗೆ ಭಾರತರತ್ನವನ್ನು ಕೊಡಲಿಲ್ಲ. ಜಗಜೀವನ್ ರಾಮ್ ಅವರಿಗೆ ಪ್ರಧಾನಿಯಾಗುವ ಅವಕಾಶ ಇದ್ದರೂ ಕಾಂಗ್ರೆಸ್ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ಧರಾಮಣ್ಣ ಅವರ ಇತಿಹಾಸ ಹೇಳಬೇಕೆಂದರೆ ಅವರು  ಕಾಂಗ್ರೆಸ್ ಗೆ ಬಂದು ಸಿಎಂ ಆದವರು. ಡಾ.ಜಿ.ಪರಮೇಶ್ವರ್ ಅವರನ್ನು ಉಪ ಮುಖ‍್ಯಮಂತ್ರಿ ಸಹ ಮಾಡಲಿಲ್ಲ. ಬದಲಾಗಿ ಅವರನ್ನೇ ಚುನಾವಣೆಯಲ್ಲಿ ಸೋಲಿಸಿದರು. ಇಷ್ಟು ಮಾತ್ರವಲ್ಲದೆ ಮಲ್ಲಿಕಾರ್ಜುನ ಖರ್ಗೆ, ಬಿ.ಎನ್.ಚಂದ್ರಪ್ಪ, ಧ್ರುವನಾರಾಯಣ, ಸೇರಿದಂತೆ ದಲಿತ ಮುಖಂಡರನ್ನು ಸೋಲಿಸಿದರು. ಇಂದಿಗೂ ಖರ್ಗೆ, ಪರಮೇಶ್ವರ್ ಮುಂದಕ್ಕೆ ಬರಲು ಬಿಡುತ್ತಿಲ್ಲ ಎಂದು ಆರೋಪಿಸಿದರು.

ದೇಶದಲ್ಲಿ ಬಿಜೆಪಿ ಕಡಿಮೆ ಅವಧಿಯ ಅಧಿಕಾರ ನಡೆಸಿದೆ. ಸಣ್ಣ ಅವಧಿಯಲ್ಲಿಯೇ ದಲಿತರು, ಅಲ್ಪಸಂಖ್ಯಾತರಿಗೆ ನಮ್ಮ ಪಕ್ಷ ವಿವಿಧ ಉನ್ನತ ಹುದ್ದೆಗಳನ್ನು ನೀಡಿದೆ. ಮುಸ್ಲಿಂ ಸಮುದಾಯದ ಅಬ್ದುಲ್ ಕಲಾಂ ಅವರನ್ನು ನಾವು ರಾಷ್ಟ್ರಪತಿ ಮಾಡಿದೆವು. ದಲಿತರಾದ ರಾಮನಾಥ ಕೋವಿಂದ್ ರನ್ನು ರಾಷ್ಟ್ರಪತಿ ಮಾಡಿದ್ದೇವೆ. ಗೋವಿಂದ ಕಾರಜೋಳ ಅವರನ್ನು ಡಿಸಿಎಂ ಮಾಡಿದ್ದೇವೆ. ಆನೇಕಲ್ ವಿಧಾನಸಭೆಯಲ್ಲಿ ಸೋಲು ಅನುಭವಿಸಿದ ಎ.ನಾರಾಯಣಸ್ವಾಮಿ ಅವರನ್ನು ಚಿತ್ರದುರ್ಗದಲ್ಲಿ ಸಂಸದರನ್ನಾಗಿ ಮಾಡಿ ಕೇಂದ್ರ ಮಂತ್ರಿ ಮಾಡಿದ್ದೇವೆ ಎಂದು ಹೇಳಿದರು.

Exit mobile version