ಕಾಂಗ್ರೆಸ್ ಪುನಶ್ಚೇತನಕ್ಕೆ ಪ್ರಶಾಂತ್ ಕಿಶೋರ್ ಸಿದ್ದಪಡಿಸಿದ್ದ ಪಿಪಿಟಿ ಸೋರಿಕೆ ; ಏನಿದೆ ಅದರಲ್ಲಿ?

prashanth kishore

ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್(Prashanth Kishore) ಕಾಂಗ್ರೆಸ್ ಪಕ್ಷದ(Congress Party) ಪುನಶ್ಚೇತನಕ್ಕಾಗಿ ಸಿದ್ದಪಡಿಸಿದ್ದ ಪಿಪಿಟಿಯ ಕೆಲ ಅಂಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗಿವೆ ಎನ್ನಲಾಗಿದೆ.

ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಅಧ್ಯಕ್ಷೆ(Congress President) ಸೋನಿಯಾ ಗಾಂಧಿ(Sonia Gandhi) ಅವರನ್ನು ಒಂದೇ ತಿಂಗಳ ಅವಧಿಯಲ್ಲಿ 3 ಬಾರಿ ಭೇಟಿಯಾಗಿ ಸುಧೀರ್ಘ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆಯನ್ನು ನಡೆಸಿದ್ದಾರೆ. ಈ ಬೆಳವಣಿಗೆಗಳ ಹಿನ್ನಲೆಯಲ್ಲಿ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಸೇರುತ್ತಾರೆ ಎನ್ನಲಾಗುತ್ತಿದೆ. ಮುಂಬರುವ ಎಲ್ಲ ಚುನಾವಣೆಗಳ ತಂತ್ರಗಾರಿಕೆಯನ್ನು ಅವರಿಗೆ ವಹಿಸಲು ಚಿಂತಿಸಲಾಗಿದೆ. ಹೀಗಾಗಿ ಚುನಾವಣಾ ತಂತ್ರಗಾರಿಕೆ ಭಾಗವಾಗಿ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕಾಗಿ ಪಿಪಿಟಿಯನ್ನು ಸಿದ್ದಪಡಿಸಿಕೊಂಡು, ಅದನ್ನು ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಚರ್ಚಿಸಿದ್ದರು.

ಆದರೆ ಇದೀಗ ಪಿಪಿಟಿ ಅಂಶಗಳು ಮಾದ್ಯಮಗಳಿಗೆ ಸೋರಿಕೆಯಾಗಿವೆ. ಸೋರಿಕೆಯಾಗಿರುವ ಪ್ರಮುಖ ಅಂಶಗಳೆಂದರೆ.

  1. ಗಾಂಧಿಯೇತರ ಕಾಂಗ್ರೆಸ್ ಅಧ್ಯಕ್ಷರು ಹೆಚ್ಚು ಪರಿಣಾಮವನ್ನು ಬೀರಬಲ್ಲರು.
  2. ಜನಸಾಮಾನ್ಯರ ಹೊಸ ರಾಜಕೀಯ ವೇದಿಕೆಯಾಗಿ ಹೊಸ ಕಾಂಗ್ರೆಸ್ ರಚನೆ.
  3. ಜಡತ್ವದಿಂದ ವಿಮೋಚನೆ
  4. ಪಕ್ಷದ ಪರಂಪರೆ ಮತ್ತು ಮೂಲತತ್ವಗಳ ರಕ್ಷಣೆ
  5. ಭಟ್ಟಂಗಿತನವನ್ನು ಹೋಗಲಾಡಿಸುವುದು.
  6. ಭ್ರಷ್ಟಾಚಾರ ಆರೋಪದಿಂದ ದೂರ ಉಳಿಯುವುದು.
  7. ಪ್ರಾದೇಶಿಕ ನಾಯಕತ್ವವನ್ನು ಸರಿಪಡಿಸುವುದು.
  8. ಮೈತ್ರಿ ಗೊಂದಲಗಳನ್ನು ಪರಿಹರಿಸಿಕೊಳ್ಳುವುದು.
  9. ತಳಮಟ್ಟದಲ್ಲಿ ಕಾರ್ಯಕರ್ತರ ಸೇನೆ ಕಟ್ಟುವುದು.
  10. ಡಿಜಿಟಲ್ ಪ್ರಚಾರ ವ್ಯವಸ್ಥೆಗೆ ಒತ್ತು ನೀಡುವುದು
  11. ಸಾಮಾಜಿಕ ಮಾದ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು.


ಇನ್ನು ಪಿಪಿಟಿ ಸೋರಿಕೆ ಬಗ್ಗೆ ಮಾದ್ಯಮವೊಂದಕ್ಕೆ ಪ್ರಶಾಂತ್ ಕಿಶೋರ್ ಪ್ರತಿಕ್ರಿಯೆ ನೀಡಿದ್ದು, ಅದು ಹಳೆಯ ನಕಲಿ ಪಿಪಿಟಿಯಾಗಿದ್ದು, ಸದ್ಯದ ರಾಜಕೀಯ ಸನ್ನಿವೇಶಕ್ಕೂ ಅದಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಆದರೆ ಪಿಪಿಟಿ ಸೋರಿಕೆ ಕುರಿತು ಕಾಂಗ್ರೆಸ್ ಪಕ್ಷ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

Exit mobile version